ತೈಲ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಹಾಗೂ ಹಣದುಬ್ಬರ ಏರಿಕೆ ನಡುವೆ ಸಂಸತ್ತಿನ ಮಹತ್ವದ ಮುಂಗಾರು ಅಧಿವೇಶನಕ್ಕೆ ಇಂದು ಚಾಲನೆ ಸಿಗಲಿದೆ.
ಜುಲೈ 18 ರಿಂದ ಆಗಸ್ಟ್ 12ರವರೆಗೂ 25 ದಿನ ಮುಂಗಾರು ಅಧಿವೇಶನ ನಿಗದಿಯಾಗಿದೆಯಾದರೂ, ರಜಾ ದಿನ ಹೊರತುಪಡಿಸಿ 14 ದಿನ ಮಾತ್ರವೇ ಕಲಾಪ ನಡೆಯಲಿದ್ದು, ಈ 14 ದಿನದಲ್ಲಿ 32 ಮಸೂದೆಗಳ ಅಂಗೀಕಾರ, ಅಗ್ನಿಪಥ್ ಯೋಜನೆ ಬಗ್ಗೆ ವಿಪಕ್ಷಗಳ ಅಪಸ್ವರ ಸೇರಿದಂತೆ ನಾನಾ ಸವಾಲುಗಳನ್ನು ಮೋದಿ ಸರ್ಕಾರ ಎದುರಿಸಬೇಕಿದೆ. ಹಾಗಾಗಿ ಈ ಅಧಿವೇಶನ ಮೋದಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಆಗಿದೆ.
ಖರ್ಗೆ ಪಟ್ಟಿ ಸಿದ್ಧ;
ಇನ್ನು, ವಿಪಕ್ಷಗಳ ಪರವಾಗಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು 16 ವಿಷಯಗಳನ್ನು ಪಟ್ಟಿ ಮಾಡಿದ್ದು, ಅವುಗಳ ಬಗ್ಗೆಯೇ ಚರ್ಚಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಅಗ್ನಿಪಥ್ ಯೋಜನೆ, ಹತೋಟಿಗೆ ಸಿಗದ ಹಣದುಬ್ಬರ, ECI, CBI, CVC ಸೇರಿ ಇತರೆ ಸಂಸ್ಥೆಗಳ ಘನತೆ ಕುಗ್ಗುತ್ತಿರುವುದು ಹಾಗೂ ವಿಪಕ್ಷ ನಾಯಕರ ವಿರುದ್ಧ ಪ್ರಜಾಸತ್ತಾತ್ಮಕವಲ್ಲದ ಕ್ರಮ ಕೈಗೊಳ್ಳುತ್ತಿರುವುದು ಹೀಗೆ ಇನ್ನಿತರೆ ವಿಷಯಗಳು ಅಡಕವಾಗಿವೆ ಎನ್ನಲಾಗಿದೆ.




