ಬೆಂಗಳೂರು: ಕೇವಲ ಮಿಸ್ಡ್ ಕಾಲ್ ಮೂಲಕ ಎಲ್‌ಪಿಜಿ ರೀಫಿಲ್ ಬುಕಿಂಗ್ ಸೌಲಭ್ಯವು ಇಂಡೇನ್ ಅನಿಲ ಗ್ರಾಹಕರಿಗೆ ಲಭ್ಯವಾಗಲಿದೆ. ದೇಶದ ಯಾವುದೇ ಭಾಗದ ಗ್ರಾಹಕರು 8454955555 ನಂಬರ್ ಗೆ ಮಿಸ್ಡ್ ಕಾಲ್ ಮಾಡಿದರೆ ರೀಫಿಲ್ ಸಿಲಿಂಡರ್ ಬುಕ್ ಮಾಡಲಾಗುವುದು ಎಂದು ಇಂಡಿಯನ್ ಆಯಿಲ್ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಭುವನೇಶ್ವರದಲ್ಲಿ ಈ ಸೇವೆಯನ್ನು ಚಾಲನೆ ನೀಡಿದ್ದಾರೆ.
ಫೋನ್ ಕರೆ ಮಾಡುವ ಅಗತ್ಯವಿಲ್ಲದೆ ಮತ್ತು ಯಾವುದೇ ಕರೆ ಶುಲ್ಕ ವಿಧಿಸದೆ ಗ್ರಾಹಕರು ಈ ಸೌಲಭ್ಯವನ್ನು ಬಳಸಬಹುದು. ಈ ಸೇವೆಯೂ ಗ್ರಾಮೀಣ ಪ್ರದೇಶದವರಿಗೆ, ವೃದ್ಧರಿಗೆ ಮತ್ತು ಐವಿಆರ್‌ಎಸ್ ಪರಿಚಯವಿಲ್ಲದವರಿಗೆ ಸಹಾಯಕವಾಗಲಿದೆ. ಈ ಸೇವೆ ಈಗ ಭುವನೇಶ್ವರದಲ್ಲಿ ಮಾತ್ರ ಲಭ್ಯವಿದ್ದು, ಕರ್ನಾಟಕದಲ್ಲಿ ಕೂಡ ಜಾರಿಗೆ ಬಂದಿದೆ ಎಂದು ತಿಳಿದು ಬಂದಿದ್ದು, ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಕಡೆ ವಿಸ್ತರಣೆಯಾಗಲಿದೆ ಎಂದು ಇಂಡಿಯನ್ ಆಯಿಲ್ ಕಂಪನಿ ತಿಳಿಸಿದೆ.