ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ವತಿಯಿಂದ ಜಿ ಕೆಟಗರಿ ಅಡಿಯಲ್ಲಿ ನಿವೇಶನ, ಮನೆಗಳನ್ನು ವಿತರಿಸಲಾಗುವುದು ಹಾಗೂ ಪ್ರಮುಖ ಪ್ರಶಸ್ತಿ ಪುರಸ್ಕೃತರು, ನ್ಯಾಯಾಧೀಶರು, ಕ್ರೀಡಾಪಟುಗಳು, ಪತ್ರಕರ್ತರು, ವಿಕಲಚೇತನರಿಗೆ ಶೇಕಡ 5 ರಷ್ಟು ಮನೆ, ನಿವೇಶನ ನೀಡಲು ನಿರ್ಧರಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ.
ಹೌದು, ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಬಾಕಿ ಇದ್ದ 103 ಪ್ರಕರಣಗಳು ಇತ್ಯರ್ಥಗೊಂಡಿವೆ. 600 ಎಕರೆಯಷ್ಟು ಜಮೀನು ಮಂಡಳಿಯ ಸ್ವಾಧೀನಕ್ಕೆ ಬಂದಿದ್ದು, ಬಡಾವಣೆಗಳ ನಿರ್ಮಾಣಕ್ಕೆ ಇದ್ದ ತೊಡಕು ನಿವಾರಣೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು, ಈ ವರ್ಷದ ಅಂತ್ಯಕ್ಕೆ ರಾಜ್ಯದ ವಿವಿದೆಡೆ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಚನ್ನಗಿರಿ, ಮೈಸೂರು, ಬಾಗಲಕೋಟೆ, ಮುಂಡರಗಿ, ಗದಗ, ಹರಿಹರ, ನೆಲಮಂಗಲ, ಮಾದನಾಯಕನಹಳ್ಳಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು, 18 ಯೋಜನೆಗಳಿಗೆ ಡಿಪಿಆರ್ ಮಾಡಿ 16 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದಿದ್ದಾರೆ.