ದೊಡ್ಡಬಳ್ಳಾಪುರ: ಕಂದಾಯ ಸಚಿವ ಆರ್.ಅಶೋಕ್ ಇಂದು ಗ್ರಾಮವಾಸ್ತವ್ಯ ಪೂರ್ಣಗೊಳಿಸಿದ ಬಳಿಕ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಹೊಸಹಳ್ಳಿ ಗ್ರಾಮದ 450 ಜನರಿಗೆ ಮನೆ ಕಟ್ಟಿಕೊಳ್ಳಲು ಜಾಗವಿರಲಿಲ್ಲ. ಹಾಗಾಗಿ ಸರ್ವೇ ನಂ.55ರಲ್ಲಿ 5 ಎಕರೆ ಜಾಗ ಮಂಜೂರು ಮಾಡಿಕೊಟ್ಟಿದ್ದೇನೆ. ಕಿವಿ ಕೇಳದ ಬಾಲಕಿಗೆ ಓದಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಆಕೆಗೆ ಮಿಷಿನ್ ನೀಡಿದ್ದೇನೆ. ಸ್ಮಶಾನದ ಒತ್ತುವರಿಯನ್ನು ಮೂರು ಗಂಟೆಗಳ ಒಳಗೆ ತೆರವುಗೊಳಿಸಿ ಗಡಿ ಗುರುತಿಸುವಂತೆ ಸೂಚಿಸಿದ್ದೇನೆ ಎಂದರು.
ನಾನು ರಾಜಕೀಯ ಮಾಡಲು ಇಲ್ಲಿ ಗ್ರಾಮವಾಸ್ತವ್ಯ ಮಾಡಿಲ್ಲ. ಮಾಸಾಶನಕ್ಕಾಗಿ 7.5 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ. ಆದರೆ ಅದು ಎಲ್ಲಿ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಸರ್ಕಾರದ ಸೌಲಭ್ಯ ಜನರ ಮನೆ ಬಾಗಿಲಿಗೆ ತಲುಪಬೇಕೆಂದು ಇಲ್ಲಿಗೆ ಭೇಟಿ ನೀಡಿ, ಸ್ಥಳದಲ್ಲೇ ತೀರ್ಮಾನ ಕೈಗೊಳ್ಳುತ್ತಿದ್ದೇನೆ. ಬಂದ ಸಿದ್ದ ಹೋದ ಸಿದ್ದ ಎಂಬಂತಾಗಬಾರದು ಎಂದರು.
ಇನ್ನು ಗ್ರಾಮವಾಸ್ತವ್ಯ ವೇಳೆ 680 ಜನರ ಪಹಣಿ ಹಾಗೂ ವೃದ್ಧಾಪ್ಯ ವೇತನ ಸಮಸ್ಯೆಯನ್ನು ಪರಿಹರಿಸಿದ್ದೇವೆ ಎಂದಿದ್ದಾರೆ. ಈ ವೇಳೆ, ಮುಂದಿನ ಬಾರಿ ನಾನು ಉತ್ತರ ಕರ್ನಾಟಕ ಭಾಗದಲ್ಲಿ ಗ್ರಾಮವಾಸ್ತವ್ಯ ಹೂಡಲಿದ್ದೇನೆ ಎಂದ ಅವರು, ಡಿಸಿಗಳೂ ಕೂಡ ಉತ್ಸಾಹದಿಂದ ಗ್ರಾಮವಾಸ್ತವ್ಯದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.