ಉತ್ತರಪ್ರದೇಶ: ತಿಹಾರ್ ಜೈಲು ವಾರ್ಡನ್, ದೆಹಲಿ ಮೂಲದ ಉದ್ಯಮಿ ಮತ್ತು ಮುಂಬೈ ಮೂಲದ ರಸಾಯನಶಾಸ್ತ್ರಜ್ಞರು ಸೇರಿ ಗ್ರೇಟರ್ ನೋಯ್ಡಾದಲ್ಲಿ ನಡೆಸುತ್ತಿದ್ದ ಮೆಥ್ ಲ್ಯಾಬ್ ಮೇಲೆ NCB ಹಾಗೂ ದೆಹಲಿ ಪೊಲೀಸರ ವಿಶೇಷ ತಂಡ ದಾಳಿ ನಡೆಸಿದ್ದು, ಈ ವೇಳೆ 95 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಯಿತು. ದೇಶೀಯ ಬಳಕೆ ಮತ್ತು ರಫ್ತು ಉದ್ದೇಶಕ್ಕಾಗಿ ಸಿಂಥೆಟಿಕ್ ಡ್ರಗ್ಸ್ ಉತ್ಪಾದಿಸುತ್ತಿದ್ದ ಈ ರಹಸ್ಯ ಪ್ರಯೋಗಾಲಯದ ಬಗ್ಗೆ ಗುಪ್ತಚರ ಮಾಹಿತಿ ದೊರಕಿದ ಹಿನ್ನಲೆ ಈ ದಾಳಿ ನಡೆದಿದೆ.
ಮೆಕ್ಸಿಕನ್ ಡ್ರಗ್ ಕಾರ್ಟೆಲ್ ‘ಕಾರ್ಟೆಲ್ ಡಿ ಜಲಿಸ್ಕೊ ನುವಾ ಜನರೇಶನ್’ ಸದಸ್ಯರು ಈ ಡ್ರಗ್ ಉತ್ಪಾದನೆಯಲ್ಲಿ ತೊಡಗಿರುವುದು ದೃಢಪಟ್ಟ ನಂತರ ದಾಳಿ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ವಿವಿಧ ರಾಸಾಯನಿಕಗಳು ಮತ್ತು ಸುಧಾರಿತ ಯಂತ್ರೋಪಕರಣಗಳೊಂದಿಗೆ ಘನ ಮತ್ತು ದ್ರವ ರೂಪಗಳಲ್ಲಿ 95 ಕೆಜಿಯಷ್ಟು ಮೆಥಾಂಫೆಟಮೈನ್ ಪತ್ತೆಯಾಗಿದೆ.
ಬಂಧಿತರಲ್ಲಿ ಒಬ್ಬರು ದೆಹಲಿ ಮೂಲದ ಉದ್ಯಮಿಯಾಗಿದ್ದು, ಈ ಮೊದಲು ಮಾದಕವಸ್ತು ಪ್ರಕರಣದಲ್ಲಿ ಕಂದಾಯ ಗುಪ್ತಚರ ಇಲಾಖೆ (DRI) ಇವರನ್ನು ಬಂಧಿಸಿತ್ತು. ಅವರು ತಿಹಾರ್ ಜೈಲು ವಾರ್ಡನ್ ಜೊತೆ ಸಂಪರ್ಕ ಹೊಂದಿದ್ದು, ಡ್ರಗ್ ಉತ್ಪಾದನೆಗೆ ಅಗತ್ಯವಾದ ರಾಸಾಯನಿಕಗಳು ಮತ್ತು ಉಪಕರಣಗಳನ್ನು ಖರೀದಿಸಲು ವಾರ್ಡನ್ ಸಹಾಯ ಮಾಡಿದ್ದಾಗಿ ತಿಳಿದುಬಂದಿದೆ. ಮುಂಬೈ ಮೂಲದ ರಸಾಯನಶಾಸ್ತ್ರಜ್ಞನನ್ನು ಇತರೆ ಆರೋಪಿಗಳು ಉತ್ಪಾದನಾ ಪ್ರಕ್ರಿಯೆ ಪರಿಶೀಲನೆಗೆ ಕರೆಸಿದ್ದು, ಇನ್ನೊಂದೆಡೆ ದೆಹಲಿಯಲ್ಲಿದ್ದ ಕಾರ್ಟೆಲ್ ಸದಸ್ಯರಿಂದ ಗುಣಮಟ್ಟದ ತಪಾಸಣೆ ನಡೆಸಲಾಗುತ್ತಿತ್ತು.
ಎಲ್ಲಾ ನಾಲ್ಕು ಶಂಕಿತರನ್ನು ಸೋಮವಾರ(28) ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ವಿಚಾರಣೆಗಾಗಿ ಆರೋಪಿಗಳನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದೇ ವೇಳೆ ಮುಂದುವರೆದ ಕಾರ್ಯಾಚರಣೆಯಲ್ಲಿ ಉದ್ಯಮಿಯ ಸಹಚರನೋರ್ವನನ್ನು ರಾಜೌರಿ ಗಾರ್ಡನ್ನಿಂದ ಬಂಧಿಸಲಾಯಿತು.
ಈ ಅಕ್ರಮ ಚಟುವಟಿಕೆಯಿಂದ ಪಡೆದ ಹಣದ ಮೂಲ ಮತ್ತು ಆಸ್ತಿಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಕೈಗಾರಿಕಾ ಪ್ರದೇಶಗಳಲ್ಲಿ ರಹಸ್ಯ ಡ್ರಗ್ ಪ್ರಯೋಗಾಲಯಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ಕಾನೂನಿನ ಕಣ್ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು NCB ತಿಳಿಸಿದೆ. ಈ ವರ್ಷ ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಇಂತಹ ಪ್ರಯೋಗಾಲಯಗಳನ್ನು ನಾಶಗೊಳಿಸಲಾಗಿತ್ತು.