ಏ.1 ರಿಂದ NPCI ಹೊಸ ನಿಯಮ ಜಾರಿಯಾಗಲಿದ್ದು, ನಿಮ್ಮ ಹಲವು ಮೊಬೈಲ್ ನ೦ಬರ್ ಡಿಲೀಟ್ ಆಗುವ ಸಾಧ್ಯತೆಯಿದೆ. ATM ಹಣ ಹಿಂಪಡೆಯಲು ಹೆಚ್ಚುವರಿ ಶುಲ್ಕದಿ೦ದ ಹಿಡಿದು ಕೆಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ನಿಯಮಗಳವರೆಗೆ ಏನೆಲ್ಲಾ ಬದಲಾವಣೆಗಳಾಗುತ್ತವೆ ಈ ಲೇಖನದಲ್ಲಿ ನೋಡೋಣ.
UPI ವಹಿವಾಟು
NPCI ನಿಯಮದ ಪ್ರಕಾರ, UPI (ಗೂಗಲ್ ಪೇ, ಫೋನ್‌ಪೇ) ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗಳು ಸಕ್ರಿಯವಾಗಿಲ್ಲದಿದ್ದರೆ, ಸಂಖ್ಯೆಯನ್ನು ಬ್ಯಾಂಕ್ ಖಾತೆಗಳಿಂದ ತೆಗೆದುಹಾಕಲಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಗೆ ಚಾಲ್ತಿ ಇರದ ಹಾಗೂ ಒಂದಕ್ಕಿಂತ ಹೆಚ್ಚು ಮೊಬೈಲ್ ಸಂಖ್ಯೆ ಇದ್ದರೆ ಅದನ್ನು ತೆಗೆದುಹಾಕಲಾಗುತ್ತದೆ.
ATM ಕ್ಯಾಪ್ ವಿತ್‌ಡ್ರಾಗೆ ಶುಲ್ಕ
ATM ಗಳಲ್ಲಿ ಅನುಮತಿಸಿದ ಮಿತಿಗಿ೦ತ ಹೆಚ್ಚು ಬಾರಿ ಹಣ ವಿತ್‌ಡ್ರಾ ಮಾಡಿದರೆ ₹17 ನಿಂದ ₹19 ಶುಲ್ಕ ಕಟ್ಟಬೇಕಾಗುತ್ತದೆ. ನಿಮ್ಮ ಬ್ಯಾಂಕ್ ಅಲ್ಲದ ATM ಗಳಲ್ಲಿ ತಿಂಗಳಿಗೆ 3-5 ವಹಿವಾಟು ಮಾಡಬಹುದು. ಅದಕ್ಕಿಂತ ಜಾಸ್ತಿಯಾದರೆ, ₹2 ಹೆಚ್ಚಳ ಮಾಡಲಾಗುತ್ತಿದೆ. ಅಕೌಂಟ್ ಬ್ಯಾಲನ್ಸ್ ಪರಿಶೀಲನೆ ಸೇರಿದಂತೆ ನಾನ್-ಟ್ರಾನ್ಸಾಕ್ಷನ್ ಶುಲ್ಕ ₹7 ಆಗುತ್ತದೆ. ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ.
LPG ಸಿಲಿಂಡರ್ ಬೆಲೆ
ಪ್ರತಿ ತಿಂಗಳ ಆರಂಭದಲ್ಲಿ ತೈಲ ಕಂಪನಿಗಳು ಎಲ್‌ಪಿಜಿ ಬೆಲೆಯನ್ನು ಪರಿಶೀಲಿಸುತ್ತವೆ. ಏಪ್ರಿಲ್ 1, 2025 ರಿಂದ LPG ದರದಲ್ಲಿ ಬದಲಾವಣೆ ಆಗಬಹುದು. ಇದು ಸಿಲಿಂಡರ್ ಬಳಕೆದಾರರಿಗೆ ನೇರ ಪ್ರಭಾವ ಬೀರುತ್ತದೆ.
ಮನೆ ಬಾಡಿಗೆ TDS ಮಿತಿ
ಮನೆ ಬಾಡಿಗೆಯಿಂದ ಹಣ ಗಳಿಸುವ ಮನೆ ಮಾಲೀಕರಿಗೆ TDS ಮಿತಿಯನ್ನು ₹2.4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರ ಅರ್ಥ, ಬಾಡಿಗೆ ಆಧಾರಿತ ಆದಾಯ ಹೊಂದಿರುವವರು ಈಗ ಹೆಚ್ಚಿನ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.
ಮಿನಿಮಮ್ ಬ್ಯಾಲನ್ಸ್ ಶುಲ್ಕ
SBI, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮೊದಲಾದ ಪ್ರಮುಖ ಬ್ಯಾಂಕುಗಳು ತಮ್ಮ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಪರಿಷ್ಕರಿಸುತ್ತಿವೆ. ನಗರ, ಪಟ್ಟಣ & ಗ್ರಾಮೀಣ ಪ್ರದೇಶಗಳಲ್ಲಿ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಅಳವಡಿಸಲಾಗುತ್ತಿದೆ.
ಸೇವಿಂಗ್ಸ್ ಅಕೌಂಟ್‌ಗಳಿಗೆ ಬಡ್ಡಿ
ಸೇವಿಂಗ್ಸ್ ಬ್ಯಾಂಕ್ ಅಕೌಂಟ್‌ಗಳಲ್ಲಿ 1,000 ರೂ ಇದ್ದವರಿಗೂ ಶೇ. 4, ಒಂದು ಲಕ್ಷ ಹಣ ಇಟ್ಟವರಿಗೂ ಶೇ. 4 ಬಡ್ಡಿ ಮಾತ್ರವೇ ಸಿಗುತ್ತದೆ. ಆದರೆ, ಈಗ ಹೆಚ್ಚು ಹಣ ಇದ್ದರೆ ಹೆಚ್ಚು ಬಡ್ಡಿದರ, ಕಡಿಮೆ ಹಣ ಇದ್ದರೆ ಕಡಿಮೆ ಬಡ್ಡಿದರ ನಿಗದಿ ಮಾಡಲಾಗುತ್ತಿದೆ.
ಕ್ರೆಡಿಟ್ ಕಾರ್ಡ್ ಲಾಭಗಳು
SBI, IDFC ಫಸ್ಟ್ ಬ್ಯಾಂಕ್ ಇತ್ಯಾದಿ ಪ್ರಮುಖ ಬ್ಯಾಂಕುಗಳು ತಮ್ಮ ವಿಸ್ತಾರ ಕ್ರೆಡಿಟ್ ಕಾರ್ಡ್‌ಗಳ ನಿಯಮದಲ್ಲಿ ಬದಲಾವಣೆ ಮಾಡುತ್ತಿವೆ. ಟಿಕೆಟ್ ವೋಚರ್, ರಿನಿವಲ್ ಲಾಭ, ಮೈಲ್‌ಸ್ಟೋನ್ ರಿವಾರ್ಡ್ ಇತ್ಯಾದಿ ಉತ್ತೇಜಕ ಪ್ಲಾನ್‌ಗಳನ್ನು ಕೈಬಿಡಲಾಗುತ್ತಿದೆ.
ಶಿಕ್ಷಣ ಸಾಲದ ಮೇಲಿನ ತೆರಿಗೆ ವಿನಾಯಿತಿ
ಈ ಹಿಂದೆ ₹7 ಲಕ್ಷಕ್ಕಿಂತ ಹೆಚ್ಚು ಶಿಕ್ಷಣ ಸಾಲ ಪಡೆದುಕೊಳ್ಳುವವರಿಗೆ 0.5% TCS ಇದ್ದರೂ, ಈಗ ಶಿಕ್ಷಣ ಸಾಲದ ಮೇಲೆ TCS ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇದು ವಿದೇಶಿ & ದೇಶೀಯ ಉನ್ನತ ಶಿಕ್ಷಣಕ್ಕಾಗಿ ಸಾಲ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಬಹಳ ಉಪಕಾರಿಯಾಗಲಿದೆ.