ನವದೆಹಲಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧ ದೆಹಲಿ ಪೊಲೀಸರು ನಿರಂತರವಾಗಿ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದಾರೆ. ಗ್ಯಾಂಗ್‌ನ 7 ಶೂಟರ್‌ಗಳನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಯಶಸ್ವಿಯಾಗಿದೆ. ಈ ಶೂಟರ್‌ಗಳು ಹರಿಯಾಣದಲ್ಲಿ ಕೊಲೆ ಮಾಡಲು ಸಂಚು ರೂಪಿಸಿ ಸಿದ್ಧರಾಗಿದ್ದರು. ಅಷ್ಟರಲ್ಲಾಗಲೇ ಖಚಿತ ಮಾಹಿತಿ ಮೇರೆಗೆ ತೆರಳಿದ ಪೊಲೀಸರ ವಿಶೇಷ ತಂಡ ಕೊಲೆ ಯತ್ನವನ್ನು ವಿಫಲಗೊಳಿಸಿದೆ. ಈ ವೇಳೆ ಆರೋಪಿಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗ್ಯಾಂಗ್‌ಸ್ಟರ್‌ಗಳ ತಂಡಗಳ ವಿರುದ್ಧ ದೆಹಲಿ ಪೊಲೀಸರ ವಿಶೇಷ ಘಟಕ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆಗೆ, ಇತರೆ ಗ್ಯಾಂಗ್‌ಗಳ ಮೇಲೂ ಪೊಲೀಸ್ ಕಡಿವಾಣವನ್ನು ಬಿಗಿಗೊಳಿಸಲಾಗುತ್ತಿದೆ. ಹಾಗೂ ದೇಶಾದ್ಯಂತ ಬಿಷ್ಣೋಯ್ ಗ್ಯಾಂಗ್ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ಮೂಲಗಳ ಪ್ರಕಾರ, ಬಾಬಾ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ.
ಪೊಲೀಸರ ಪ್ರಕಾರ, ಹರಿಯಾಣದಲ್ಲಿ ಕೊಲೆ ಮಾಡಲು ಮುಂದಾಗಿದ್ದ ಎಲ್ಲಾ ಶೂಟರ್‌ಗಳನ್ನು ಪಂಜಾಬ್ ಮತ್ತು ಇತರೆ ರಾಜ್ಯಗಳಿಂದ ಬಂಧಿಸಲಾಗಿದೆ. ಹರಿಯಾಣ ಹತ್ಯೆಯ ಜೊತೆಗೆ ಇತರೆ ಕಡೆಗಳಲ್ಲೂ ಹಲವು ವ್ಯಕ್ತಿಗಳು ಈ ಗ್ಯಾಂಗ್‌ನ ಗುರಿಯಾಗಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳಿಂದ 6 ಸೆಮಿಆಟೋಮ್ಯಾಟಿಕ್ ಪಿಸ್ತೂಲ್, 26 ಕಾರ್ಟ್ರಿಡ್ಜ್‌ಗಳು, ಬೈಕ್ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಶೇಷ ಘಟಕದ ಡಿಸಿಪಿ ಪ್ರಮೋದ್ ಕುಶ್ವಾಹ ತಿಳಿಸಿದ್ದಾರೆ.
ಅರ್ಜೂ ಬಿಷ್ಣೋಯ್ ಎಂಬ ವ್ಯಕ್ತಿ ಈ ಶೂಟರ್‌ಗಳಿಗೆ ಹತ್ಯೆಯ ಸೂಚನೆಗಳನ್ನು ನೀಡುತ್ತಿದ್ದ. ಈ ಅರ್ಜು ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್ ಎಂಬಾತನೊಂದಿಗೆ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ. ಹಾಗೂ ಈ ಶೂಟರ್‌ಗಳು ರಾಜಸ್ಥಾನದ ಗಂಗಾನಗರದಲ್ಲಿರುವ ಸುನಿಲ್ ಪೆಹಲ್ವಾನ್ ಎಂಬುವವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಪ್ರಮೋದ್ ಕುಶ್ವಾಹ ಹೇಳಿದರು.
ಈ ಪ್ರಕರಣದ ಮೊದಲ ಬಂಧನವನ್ನು ಅಕ್ಟೋಬರ್ 23 ರಂದು ದೆಹಲಿಯ ಐಎಸ್‌ಬಿಟಿಯಿಂದ ಮಾಡಲಾಗಿದೆ. ಅದರ ನಂತರ ಗಂಗಾನಗರದಲ್ಲಿ ಸುಖ್ರಾಮ್, ಆನಂತರ ಬಾದಲ್, ಅಮರ್, ಸಾಹಿಲ್ ಮತ್ತು ಪ್ರಮೋದ್ ನನ್ನು ಬಂಧಿಸಲಾಯಿತು. ಆರೋಪಿಗಳನ್ನು ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯಿಂದ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಅಧಿಕಾರಿಗಳ ಪ್ರಕಾರ, ಏಪ್ರಿಲ್‌ನಲ್ಲಿ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಅನ್ಮೋಲ್ ಬಿಷ್ಣೋಯ್ ಎನ್‌ಐಎಗೆ ಬೇಕಾಗಿದ್ದಾರೆ. ಏಜೆನ್ಸಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯಲ್ಲೂ ಅವರನ್ನು ಇರಿಸಲಾಗಿದೆ. ಹೀಗಾಗಿ ಜೈಲಿನಲ್ಲಿರುವ ಕುಖ್ಯಾತ ಕ್ರಿಮಿನಲ್ ಲಾರೆನ್ಸ್ ಬಿಷ್ಣೋಯ್‌ನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಬಗ್ಗೆ ಮಾಹಿತಿ ನೀಡುವವರಿಗೆ ಎನ್ಐಎ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.