Ganesh festival | ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರು ಜನ ತಮ್ಮ ಊರುಗಳಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು ಪ್ರಯಾಣಿಕರ ಅನುಕೂಲಕ್ಕೆ KSRTC ಮತ್ತು NWKRTC ಹೆಚ್ಚುವರಿ ಬಸ್ ಸೇವೆ ಒದಗಿಸುತ್ತಿವೆ.
ಹೌದು, ಕೆಎಸ್‌ಆರ್‌ಟಿಸಿ 1,500 ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಲಿದ್ದು, ಇಂದು ಮತ್ತು ನಾಳೆ ಬೆಂಗಳೂರಿನಿಂದ ವಿಶೇಷ ಬಸ್ ಸೇವೆ ಇರಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ವಿವಿಧ ನಗರಗಳಿಗೆ ಬೆಂಗಳೂರಿನಿಂದ 1,500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿರುತ್ತದೆ. ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ:27.08.2025 ಹಾಗೂ 31.08.2025ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು KSRTC ತಿಳಿಸಿದೆ.
ಖಾಸಗಿ ಬಸ್ ದರ ದುಪ್ಪಟ್ಟು ಏರಿಕೆ!
ಇನ್ನು, ಗೌರಿ-ಗಣೇಶ ಹಬ್ಬಕ್ಕಾಗಿ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಯ ಜನರು ತಮ್ಮ ಊರಿಗೆ ಹೋಗಲು ಸಜ್ಜಾಗಿದ್ದು, ಇದನ್ನೇ, ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಪ್ರಯಾಣದ ದರ ದುಪ್ಪಟ್ಟು ಹೆಚ್ಚಿಸಿ, ಲೂಟಿ ಮಾಡುತ್ತಿದ್ದಾರೆ.
ಹೌದು, ಬೆಂಗಳೂರು-ಧರ್ಮಸ್ಥಳ ಪ್ರಯಾಣ ದರ ಸಾಮಾನ್ಯವಾಗಿ 600–1,100ರೂ ಇದ್ದದ್ದು, ಇದೀಗ 1,499–2,600ಕ್ಕೆ ಏರಿದೆ. ಬೆಂಗಳೂರು-ಕಲಬುರಗಿ 570-1300 ರೂ. ಸಾಮಾನ್ಯ ದರ, ರಜಾ ದಿನ ದರ 950-2200 ರೂ., ಕಾರವಾರ 740-1600 ರೂ. ಸಾಮಾನ್ಯ ದರ, ರಜಾ ದಿನ ದರ 1500-3499 ರೂ., ಕೊಡಗು- 494-849 ರೂ. ಸಾಮಾನ್ಯ ದರ, ರಜಾ ದಿನದ ದರ 680-5000 ರೂ. ಹೀಗೆ ವ್ಯತ್ಯಾಸ ಕಂಡುಬಂದಿದೆ.
ಇನ್ನು, ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಹೆಚ್ಚಿಸಿರುವುದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವು ಮಾರ್ಗಗಳಲ್ಲಿ ಟಿಕೆಟ್ ದರ ದ್ವಿಗುಣಗೊಂಡಿವೆ ಮತ್ತು 3ಪಟ್ಟು ಹೆಚ್ಚಾಗಿದೆ ಎಂದು ಕೆಲ ಪ್ರಯಾಣಿಕರು ದೂರಿದ್ದಾರೆ.




