ಕೊಪ್ಪಳ: ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಪಾನಿಪುರಿ, ಗೋಬಿಮಂಚೂರಿಯಂತೆ ಸಕತ್ ಫೇಮಸ್ ಆಗಿರುವ ಇನ್ನೊಂದು ಸ್ಟ್ರೀಟ್ ಫುಡ್ ಅಂದ್ರೆ ಅದು ಎಗ್‌ರೈಸ್. ಅದರಲ್ಲೂ ಬಹುತೇಕ ಶ್ರಮಿಕ ವರ್ಗ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಮಧ್ಯಾಹ್ನದ ಊಟವೂ ಇದೇ ಎಗ್‌ರೈಸ್ ಆಗಿದೆ.
ಹೀಗಾಗಿಯೇ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರೂ ರಸ್ತೆ ಬದಿಯಲ್ಲಿ ಎಗ್ ರೈಸ್ ಅಂಗಡಿಗಳು ಕಾಣಸಿಗೋದು ಸರ್ವೇ ಸಾಮಾನ್ಯ. ಅಲ್ಲದೇ ಸಾಕಷ್ಟು ಮಂದಿ ಹೀಗೆ ರಸ್ತೆ ಬದಿ ಸಿಗುವ ಗೂಡಂಗಡಿ, ತಳ್ಳುಗಾಡಿಗಳಲ್ಲಿಯೇ ಎಗ್‌ರೈಸ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ ಹೀಗೆ ಸಿಕ್ಕ ಸಿಕ್ಕಲ್ಲಿ ಸಿಗುವ ಎಗ್‌ರೈಸ್ ಎಷ್ಟು ಸೇಫ್ ಅನ್ನೋದನ್ನು ನೀವು ಯೋಚನೆ ಮಾಡಲೇಬೇಕು. ಯಾಕಂದ್ರೆ ಕೊಪ್ಪಳದ ಎಗ್‌ರೈಸ್ ಅಂಗಡಿಯೊಂದರಲ್ಲಿ ಎಗ್‌ರೈಸ್ ತಯಾರಿಸಲು ಕೊಳೆತ ಮೊಟ್ಟೆಗಳನ್ನು ಬಳಕೆ ಮಾಡುತ್ತಿದ್ದದ್ದು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದೆ.
ಕೊಪ್ಪಳ ನಗರದ ಕೆಲ ಎಗ್ ರೈಸ್ ಅಂಗಡಿಗಳಿಗೆ ಜಿಲಾನಿ ಪಾಷಾ ಎಂಬಾತ ಕೊಳೆತ ಮೊಟ್ಟೆಗಳನ್ನು ಪೂರೈಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಆಹಾರ ಗುಣಮಟ್ಟ ಹಾಗೂ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಟ್ರೇಗಳಲ್ಲಿ ತರಲಾಗಿದ್ದ ಕೊಳೆತ ಮೊಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಪ್ಪಳ ಸಮೀಪದ ಪದ್ಮಜಾ ಕೋಳಿ ಫಾರ್ಮ್ ಕೊಳೆತ ಕೋಳಿ ಮೊಟ್ಟೆಗಳನ್ನು ಮಾರಾಟ ಮಾಡುತ್ತಿದ್ದು, ಜಿಲಾನಿ ಪಾಷಾ ಅಲ್ಲಿಂದ ಖರೀದಿಸಿ ಎಗ್ಗ್ ರೈಸ್ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ.
ಮಾರುಕಟ್ಟೆಯಲ್ಲಿ ಒಂದು ಡಜನ್ ಅಂದ್ರೆ 12 ಮೊಟ್ಟೆಗಳಿಗೇ 60-65 ರೂಪಾಯಿ ದರವಿದೆ. ಆದರೆ 30 ಮೊಟ್ಟೆಗಳಿರುವ ಟ್ರೈ ಗೆ ಕೇವಲ 80 ರೂಪಾಯಿಗೆ ಖರೀದಿಸುವ ಜೀಲಾನಿ ಪಾಷಾ, ಎಗ್ ರೈಸ್ ಅಂಗಡಿಗಳಿಗೆ 100 ರೂಪಾಯಿಗೊಂದು ಟ್ರೈಯಂತೆ ಮಾರಾಟ ಮಾಡುತ್ತಿದ್ದ. ಕೊಳೆತ ಮೊಟ್ಟೆಗಳು ಮೂರು ಗಂಟೆಯೊಳಗೆ ಹುಳುಗಳಾಗುತ್ತವೆ. ಇಂತಹ ಮೊಟ್ಟೆಗಳನ್ನು ಬಳಕೆ ಮಾಡುವುದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಪಶು ಇಲಾಖೆಯ ಸಹಕಾರದೊಂದಿಗೆ ಕೋಳಿ ಫಾರ್ಮ್ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಗುಣಮಟ್ಟ ಹಾಗೂ ಸುರಕ್ಷಿತ ಅಧಿಕಾರಿ ಮಾಹಿತಿ ನೀಡಿದ್ದಾರೆ.