ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಮಂಡಿಸಿರುವ 4.48 ಲಕ್ಷ ಕೋಟಿ ರೂಪಾಯಿ ಗಾತ್ರದ ಬೃಹತ್ ಬಜೆಟ್‌ನಲ್ಲಿ ರಾಜ್ಯದ ಪ್ರಗತಿಗಾಗಿ 7 ಅತ್ಯಂತ ಮಹತ್ವದ ಹೊಸ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.
1 ಗೃಹಾಧಾರಿತ ಉಪಶಮನ ಆರೈಕೆ (ಕೇರಳ ಮಾದರಿ)
ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಮನೆ ಬಾಗಿಲಿಗೇ ಚಿಕಿತ್ಸೆ ನೀಡುವ ವಿಶೇಷ ಯೋಜನೆ ಇದಾಗಿದೆ. ‘Pallium India’ ಸಂಸ್ಥೆಯ ಸಹಯೋಗದೊಂದಿಗೆ ರೋಗಿಗಳಿಗೆ ಅವರ ಸ್ವಗೃಹದಲ್ಲೇ ದೀರ್ಘಕಾಲೀನ ವೈದ್ಯಕೀಯ ಆರೈಕೆ ಒದಗಿಸಲಾಗುತ್ತದೆ.
2 ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ
ರೈತರ ಸ್ಥಿರ ಆದಾಯಕ್ಕಾಗಿ ಕೃಷಿ ಸಂಸ್ಕರಣೆ ಮತ್ತು ತ್ಯಾಜ್ಯ ಮರುಬಳಕೆಗೆ ಒತ್ತು ನೀಡಲು ಈ ಯೋಜನೆ ರೂಪಿಸಲಾಗಿದೆ. ಮುಂದಿನ 3 ವರ್ಷಗಳಲ್ಲಿ ₹100 ಕೋಟಿ ವೆಚ್ಚದಲ್ಲಿ ಈ ಕಾರ್ಯಕ್ರಮ ಜಾರಿಯಾಗಲಿದೆ.
3 ವಸುಧಾಮೃತ ಕಾರ್ಯಕ್ರಮ
ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ರೈತರಲ್ಲಿ ಉತ್ತೇಜಿಸುವ ನಿಟ್ಟಿನಲ್ಲಿ ಈ ವಿನೂತನ ಯೋಜನೆಯನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಘೋಷಿಸಲಾಗಿದೆ.
4 ಸಸ್ಯ ಸಂಜೀವಿನಿ ಯೋಜನೆ
ಜೈವಿಕ ಪೀಡೆನಾಶಕ ಮತ್ತು ಕೀಟನಾಶಕಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಸುರಕ್ಷಿತ ಬೆಳೆ ನಿರ್ವಹಣೆಗೆ ಈ ಯೋಜನೆ ಪೂರಕವಾಗಿದೆ. ರಾಸಾಯನಿಕ ಮುಕ್ತ ಕೃಷಿಗೆ ಇದು ದೊಡ್ಡ ಬೂಸ್ಟ್ ನೀಡಲಿದೆ.
5 ಫಲಧಾರೆ ಕಾರ್ಯಕ್ರಮ
ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆ ನಿವಾರಣೆಗೆ ₹5 ಕೋಟಿ ವೆಚ್ಚದಲ್ಲಿ 1000 ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಹೈನುಗಾರರಿಗೆ ಇದು ವರದಾನವಾಗಲಿದೆ.
6 ಮುಖ್ಯಮಂತ್ರಿ ಸೌರ ಕೃಷಿ ಯೋಜನೆ
ರೈತರಿಗೆ ನಿರಂತರ ವಿದ್ಯುತ್ ನೀಡಲು ಅಂದಾಜು ₹10,500 ಕೋಟಿ ವೆಚ್ಚದಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
7 ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ
40 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು 11 ಪಾಲಿಟೆಕ್ನಿಕ್ ಕಾಲೇಜುಗಳನ್ನು ಅಂತರಾಷ್ಟ್ರೀಯ ಮಟ್ಟದ ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸಲು ₹2,500 ಕೋಟಿ ಮೀಸಲಿಡಲಾಗಿದೆ.




