ಬೆಂಗಳೂರು: ಮಹಾರಾಷ್ಟ್ರದ ಬೆಳಗಾವಿ ಗಡಿಯಲ್ಲಿ ಕೆಎಸ್ಆರ್ಟಿಸಿ ನೌಕರರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಭುಗಿಲೆದ್ದಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ಬಂದ್ ದಿನದಂದು ಏನಿರತ್ತೆ? ಏನಿರಲ್ಲ?
ಮಾರ್ಚ್ 22 ರಂದು ಬ್ಯಾಂಕುಗಳು ಮುಚ್ಚುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಕ್ಯಾಬ್, ಆಟೋ ರಿಕ್ಷಾ ಮತ್ತು ಖಾಸಗಿ ರಸ್ತೆ ಸಾರಿಗೆ ಬಸ್ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಮೆಟ್ರೋ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ರಾಜ್ಯ ಸರ್ಕಾರಿ ಕಚೇರಿಗಳನ್ನು ಮುಚ್ಚುವ ಬಗ್ಗೆ ಯಾವುದೇ ಅಧಿಕೃತ ಸುತ್ತೋಲೆ ಇಲ್ಲ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಅಗತ್ಯ ಸೇವೆಗಳಾಗಿರುವ ಆಸ್ಪತ್ರೆಗಳು ಮತ್ತು ಔಷಧಿ ಅಂಗಡಿಗಳು ರಾಜ್ಯಾದ್ಯಂತ ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಬಂದ್ ದಿನದಂದು ಹೋಟೆಲ್ಗಳು ಎಂದಿನಂತೆ ತೆರೆದಿರುತ್ತವೆ.
ಇನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಮತ್ತು ವಿವಿಧ ತರಗತಿ ಪರೀಕ್ಷೆಗಳು ನಡೆಯುತ್ತಿರುವ ವೇಳೆ ಬಂದ್ ಹಮ್ಮಿಕೊಂಡಿರುವುದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಸಾಕಷ್ಟು ಗೊಂದಲ ಮತ್ತು ಆತಂಕವನ್ನು ಉಂಟುಮಾಡಿದೆ. ಕೆಲವು ಶಾಲೆಗಳು ಮತ್ತು ಕಾಲೇಜುಗಳು ಬಂದ್ಗೆ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿವೆ.
ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಬಾರದು ಮತ್ತು ಮುಂದೂಡಬೇಕು ಎಂಬ ಮನವಿಯ ಹೊರತಾಗಿಯೂ, ಕನ್ನಡ ಪರ ಸಂಘಟನೆಗಳು ಇದರಿಂದ ಹಿಂದೆ ಸರಿಯಲಿಲ್ಲ. ಪರೀಕ್ಷೆಯ ದಿನಾಂಕವನ್ನೂ ಸರ್ಕಾರ ಮುಂದೂಡಿಲ್ಲ. ಈ ಮಧ್ಯೆ, ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸಬೇಕಾಗಲಿದೆ. ಹೀಗಾಗಿ, ಬಂದ್ ದಿನದಂದು ಪರೀಕ್ಷೆಗಳನ್ನು ನಡೆಸಿದರೆ ಮಕ್ಕಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಂದ್ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘಗಳಿಂದಲೂ ಬೆಂಬಲ ದೊರೆತಿದೆ. ಕನ್ನಡ ರಕ್ಷಣ ವೇದಿಕೆಯ ಶಿವರಾಮೇಗೌಡ ಬಣವು ಬೆಂಬಲವನ್ನು ವ್ಯಕ್ತಪಡಿಸಿದೆ. ಓಲಾ, ಉಬರ್ ಅಸೋಸಿಯೇಷನ್ ಮತ್ತು ಆಟೋ ಸಂಸ್ಥೆಗಳಿಂದಲೂ ಬಂದ್ಗೆ ಬೆಂಬಲ ದೊರೆತಿದೆ.