ಮೈಸೂರು: ದಿನಕ್ಕೆ 100 ಕೋಟಿ ಲೂಟಿ ಆಗುತ್ತಿದೆ; ಎಲ್ಲಾ ವ್ಯವಹಾರಗಳೂ ಸಿಎಂ ಕಚೇರಿಯಲ್ಲಿ ನಡೆಯುತ್ತಿದ್ದು, ಕೈ ನಾಯಕರು ಕತ್ತೆ ಕಾಯುತ್ತಿದ್ದಾರಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹೌದು, ಮೈಸೂರಿನಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಲಿಂಗಾಯತರು ತಲೆ ತಗ್ಗಿಸುವಂತೆ ರಾಜ್ಯದಲ್ಲಿ ಆಡಳಿತ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ದಕ್ಷಿಣೆ ಕೊಟ್ಟಿದ್ದಕ್ಕೆ ಎಲ್ಲಾ ಮಠಾಧೀಶರೂ ಸಿಎಂ ಪರ ಮಾತನಾಡುತ್ತಿದ್ದು, ಮಠಾಧೀಶರು ಧರ್ಮ ಕಾರ್ಯ ಮಾಡಬೇಕೇ ಹೊರತು ರಾಜಕೀಯ ಮಾತನಾಡಬಾರದು ಎಂದು ಹೇಳಿದರೆ.
ಇನ್ನು, ದಿನಕ್ಕೆ 100 ಕೋಟಿ ರೂ ಲೂಟಿ ಆಗುತ್ತಿದ್ದು, ಎಲ್ಲಾ ವ್ಯವಹಾರಗಳೂ ಸಿಎಂ ಕಚೇರಿಯಲ್ಲಿ ನಡೆಯುತ್ತವೆ. ಶ್ರೀರಾಮುಲು ಅವರನ್ನು ಮುಗಿಸಲು ಯತ್ನಿಸಲಾಗುತ್ತಿದೆ. ಕೈ ನಾಯಕರು ಕತ್ತೆ ಕಾಯುತ್ತಿದ್ದಾರಾ ಎಂದು ಶಾಸಕರು ಕಿಡಿಕಾರಿದರು.
ದುಷ್ಟರನ್ನು ನಾಶ ಮಾಡುವಂತೆ ಪ್ರಾರ್ಥಿಸಿದೆ: ಯತ್ನಾಳ್
ಇನ್ನು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಯತ್ನಾಳ್, ರಾಜ್ಯದಲ್ಲಿ ಅಪಾರ ಭ್ರಷ್ಟಾಚಾರ ನಡೆಯುತ್ತಿದ್ದು, ದುಷ್ಟರನ್ನು ನಾಶ ಮಾಡುವಂತೆ ಪ್ರಾರ್ಥಿಸಿದ್ದೇನೆ.
ವಿಪಕ್ಷ, ಆಡಳಿತ ಪಕ್ಷದಲ್ಲಿರುವವರು ಲೂಟಿ ಮಾಡುತ್ತಿದ್ದಾರೆ. ಆದಷ್ಟೂ ಬೇಗ ನನ್ನ ಹೋರಾಟ ಮುಗಿಯಲಿದೆ. ಬದಲಾವಣೆ ಆಗಬೇಕು. ವಿಪಕ್ಷದವರಿಗೂ ಹಣ ಸಂದಾಯವಾಗುತ್ತಿದ್ದು, ಪಾರ್ಟನರ್ ಆಗಿದ್ದಾರೆ. ಹಾಗಾಗಿ ಯಾವುದನ್ನೂ ಪ್ರಶ್ನಿಸುತ್ತಿಲ್ಲ ಯತ್ನಾಳ್ ಆರೋಪಿಸಿದ್ದಾರೆ.