ಬೆಂಗಳೂರು: ರಾಜ್ಯದ ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಪತಿ ಹಾಗೂ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ತಮ್ಮ ಪತಿ ಐಎಫ್ ಎಸ್ ಅಧಿಕಾರಿ ನಿತಿನ್ ಸುಭಾಷ್ ವಿರುದ್ಧ ಬೆಂಗಳೂರು ನಗರದ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಈ ಕುರಿತು ಪತಿ ಐಎಫ್ ಎಸ್ ಅಧಿಕಾರಿ ನಿತಿನ್ ಸುಭಾಷ್ ಸೇರಿದಂತೆ ಒಟ್ಟು 7 ಜನರ ವಿರುದ್ಧ ವರದಕ್ಷಿಣೆ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಎಫ್ ಐ ಆರ್ ದಾಖಲಾಗಿದೆ.
2011ರಲ್ಲಿ ನಿತಿನ್ ಜೊತೆ ವರ್ತಿಕಾ ವಿವಾಹವಾಗಿತ್ತು. ತಮ್ಮ ಪತಿಗೆ ಅತಿಯಾದ ಕುಡಿಯುವ ಮತ್ತು ಧೂಮಪಾನ ಮಾಡುವ ಚಟವಿದ್ದು, ಇದನ್ನು ಬಿಡುವಂತೆ ಹೇಳಿದಾಗ ಹಲ್ಲೆ ಮಾಡಿದ್ದಾರೆ. ಇನ್ನು ದೀಪಾವಳಿಗೆ ಉಡುಗೊರೆ ನೀಡಿಲ್ಲ ಎಂದು ವಿಚ್ಛೇದನ ಬೆದರಿಕೆ ಹಾಕಿದ್ದು, ಮದುವೆ ಸಂದರ್ಭದಲ್ಲಿ ಚಿನ್ನಾಭರಣ ಪಡೆದುಕೊಂಡಿದ್ದು, ಇನ್ನು ಹೆಚ್ಚಿನ ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದರು ಎಂದು ವರ್ತಿಕಾ ಕಟಿಯಾರ್ ಅವರು ಆರೋಪಿಸಿದ್ದಾರೆ. ಪೊಲೀಸ್ ಅಧಿಕಾರಿಯದ್ದೇ ಈ ಪರಿಸ್ಥಿತಿ ಆದ್ರೆ, ಸಾಮಾನ್ಯರ ಪಾಡೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.