ಬಳ್ಳಾರಿ,ಫೆ.22: ಒಂದು ಮಗುವಿಗೆ ಉತ್ತಮ ಆರೋಗ್ಯವನ್ನು ನೀಡಿದರೆ ಅದು ಆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಒಂದು ಉಪಯುಕ್ತವಾದ ಆಸ್ತಿ ನೀಡಿದಂತೆ. ಇಂದ್ರಧನುಷ್ ಮಿಷನ್ 3.0 ಲಸಿಕೆಯು ಬಾಲ್ಯದಲ್ಲಿ ಮಕ್ಕಳನ್ನು ಕಾಡುವ ಮಾರಕ ರೋಗಗಳನ್ನು ನಿಯಂತ್ರಿಸುವುದರೊಂದಿಗೆ ಮಕ್ಕಳ ಬೆಳವಣಿಗೆಗೆ ಸಹಾಯಕಾರಿಯಾಗಲಿದ್ದು ಹುಟ್ಟಿನಿಂದ 2 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ತಪ್ಪದೇ ಲಸಿಕೆ ಹಾಕಿಸಿ ಎಂದು ಜಿಪಂ ಸಿಇಒ ನಂದಿನಿ ಕೆ.ಆರ್.ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಪಂ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಪಾರ್ವತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತೀವ್ರಗೊಂಡ ಮಿಷನ್ ಇಂದ್ರಧನುಷ್ 3.0 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎನ್‍ಹೆಚ್‍ಎಫ್‍ಎಸ್ ಸರ್ವೆ ಪ್ರಕಾರ ಜಿಲ್ಲೆಯ ಜನರಲ್ಲಿ ಇಂದ್ರಧನುಷ್ ಬಗ್ಗೆ ಅರಿವಿನ ಕೊರತೆಯಿದೆ. ಸರ್ವೆ ಪ್ರಕಾರ ಬಳ್ಳಾರಿ ಜಿಲ್ಲೆ ಲಸಿಕೆ ಹಾಕಿಸಿಕೊಳ್ಳುವಲ್ಲಿ ತುಂಬಾ ಹಿಂದೆ ಉಳಿದಿದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ಇಂದ್ರ ಧನುಷ್ ನಮ್ಮ ಜಿಲ್ಲೆಗೆ ಬಂದಿರುವುದು ಸಮಸ್ಯೆ ಎಂದು ತಿಳಿದುಕೊಳ್ಳದೆ ಇದೊಂದು ಅವಕಾಶ ಎಂದು ಭಾವಿಸಿ ಎಲ್ಲರೂ ತಮ್ಮ 2 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಪಡೆಯುವ ಹಾಗೆ ಕಾರ್ಯನಿರ್ವಹಿಸಿ ಎಂದರು.
ಎಲ್ಲಾ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಸಿಬ್ಬಂದಿ ಶೆ.100 ರಷ್ಟು ಶ್ರಮವಹಿಸುವ ಮೂಲಕ ಯಾವ ಮಗವೂ ಕೂಡ ಲಸಿಕೆಯಿಂದ ದೂರ ಉಳಿಯದಂತೆ ನೋಡಿಕೊಂಡು ಹೋಗುವಂತೆ ಸೂಚನೆ ನೀಡಿದ ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಲಸಿಕೆ ಯಿಂದ ದೂರ ಉಳಿದಿರುವ ಮಕ್ಕಳನ್ನು ಇದರ ಒಳಪಡಿಸಿ ಎಂದು ಅವರು ತಿಳಿಸಿದರು.
ಲಸಿಕೆ ಪ್ರಕ್ರಿಯೆಯಲ್ಲಿ 9 ಸಾವಿರ ಜನ ವ್ಯಾಕ್ಸಿನ್ ತೆಗೆದುಕೊಳ್ಳಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಎರಡು ದಿನಗಳಲ್ಲಿ 7 ಸಾವಿರ ಮಕ್ಕಳು ಹೆಸರು ನೋಂದಾಯಿಸಿಕೊಂಡಿರುವುದು ಒಳ್ಳೆಯ ವಿಚಾರ, ಇನ್ನೂ ಹೆಚ್ಚಿನ ಸಂಖ್ಯೆಯ ಮಕ್ಕಳು, ಗರ್ಭಿಣಿಯರು ಇದರ ಪ್ರಯೋಜನೆ ಪಡೆಯಲಿದ್ದಾರೆ. ಲಸಿಕೆಯಿಂದ ದೂರ ಉಳಿದವರಿಗೆ ಕೂಡ ಇದರ ಪ್ರಯೋಜನವಾಗುವಂತೆ ಪ್ರತಿ ಗ್ರಾಪಂ ವಾಪ್ತಿಯಲ್ಲಿ ಕಸವಿಲೇವಾರಿ ವಾಹನದಲ್ಲಿ ಜಿಂಗಲ್ಸ್ ಮೂಲಕ ಲಸಿಕೆಯ ಮಹತ್ವದ ಕುರಿತು ಪ್ರಚಾರ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಆರ್.ಅನಿಲ್ ಕುಮಾರ್ ಅವರು ಮಾತನಾಡಿ, ರಾಷ್ರೀಯ ಮಟ್ಟದಲ್ಲಿ ಇಂದ್ರಧನುಷ್ ಕಾರ್ಯಕ್ರಮ ನಡೆಯುತ್ತಿದೆ. ಮಕ್ಕಳಲ್ಲಿ ಕಾಣುವ ಹನ್ನೊಂದು ಮಾರಕ ರೋಗಗಳನ್ನು ನಿಯಂತ್ರಿಸಲು ಲಸಿಕೆ ನೀಡಲಾಗುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ದೇಶದ ಶಕ್ತಿಯನ್ನು ಹೆಚ್ಚಿಸಲು, ಮಕ್ಕಳ ಆರೋಗ್ಯ ಕಾಪಾಡಲು ಲಸಿಕೆ ತುಂಬಾ ಮುಖ್ಯ. ಕಳೆದ ವರ್ಷ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಮಾತ್ರ ಲಸಿಕೆ ಕಾರ್ಯಕ್ರಮವನ್ನು ನಡೆಸಲಾಗಿತ್ತು, ಈ ವರ್ಷ ಜಿಲ್ಲೆಯ ಪೂರ್ತಿಯ ಲಸಿಕೆ ಹಾಕುವ ಗುರಿಯಿದೆ ಎಂದು ಹೇಳಿದರು.
ಲಸಿಕೆಯ ವಿವರ: ಫೆ.22,23,24 ಮತ್ತು 26 ನಾಲ್ಕು ದಿನಗಳ ಲಸಿಕೆ ನೀಡಲಾಗುತ್ತದೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. 2ವರ್ಷದೊಳಗಿನ 9211 ಮಕ್ಕಳು,2106 ಗರ್ಭಿಣಿಯರಿಗೆ ಲಸಿಕೆ ಹಾಕುವ ಗುರಿಹೊಂದಲಾಗಿದೆ. 625 ಲಸಿಕಾ ಕೇಂದ್ರಗಳನ್ನು ಹಾಗೂ 57 ಸಂಚಾರಿ ಲಸಿಕಾ ತಂಡಗಳನ್ನು ಸಿದ್ದತೆಗೊಳಿಸಲಾಗಿದ್ದು, 694 ಲಸಿಕಾ ಅಧಿವೇಶನವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಆರ್‍ಸಿಎಚ್ ಅಧಿಕಾರಿ ಅನಿಲಕುಮಾರ್ ತಿಳಿಸಿದರು.
ವಲಸಿಗರಿಗೆ ಮೊದಲ ಆದ್ಯತೆ; ಪ್ರಮುಖವಾಗಿ ಬೇರೆ ಬೇರೆ ಪ್ರದೇಶಗಳಿಂದ ಜಿಲ್ಲೆಗೆ ವಲಸೆ ಬಂದಿರುವ ವಲಸಿಗರಿಗೆ ಲಸಿಕೆ ಹಾಕಲಾಗುತ್ತದೆ. ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರಿಗೆ ಲಸಿಕೆಯಲ್ಲಿ ಮೊದಲ ಆಧ್ಯತೆ ನೀಡಲಾಗುತ್ತದೆ. ಕಟ್ಟಡ ಕಾರ್ಮಿಕರಿಗೆ ಇದರ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಮಾರಕ ರೋಗಗಳನ್ನು ನಿಯಂತ್ರಿಸುವಿಕೆ: 2 ವರ್ಷದೊಳಗಿನ ಮಕ್ಕಳಲ್ಲಿ ಕಾಣುವ ಪೋಲಿಯೋ, ಬಿಸಿಜಿ, ಬಾಲ ಕ್ಷಯ, ಹಾಗೂ ಹೈಪಿಟೇಟಸ್-ಬಿ,ಇನ್ ಪ್ಲುಯೆಂಜಾ-ಬಿ, ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು ಸೇರಿರುವ ಪೆಂಟಾವಲೆಂಟ್, ರೋಟಾವೈರಸ್, ದಡಾರ-ರುಬೆಲ್ಲಾ ಮುಂತಾದ ಮುಂತಾದ ಮಾರಕ ರೋಗಗಳನ್ನು ತಡೆಗಟ್ಟಲು ಲಸಿಕೆ ಅಭಿಯಾನವನ್ನು ಶುರು ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಯಾವ ಮಗುವು ಕೂಡ ಇದರಿಂದ ದೂರ ಉಳಿಯದಂತೆ ನೋಡಿಕೊಂಡು ಹೋಗಲಾಗುತ್ತದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್, ಎಸ್‍ಎಂಓ ಡಾ.ಆರ್.ಎಸ್ ಶ್ರೀಧರ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಅಬ್ದುಲ್ಲಾ, ತಾಲೂಕು ಆರೋಗ್ಯ ಅಧಿಕಾರಿ ಮೋಹನ್ ಕುಮಾರಿ, ಡಾ.ಕಾಶಿಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪ, ಡಾ.ಸುಧಾರಾಣಿ, ಡಾ.ತಬುಸುಮ್ ಖಾನುಮ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಇತರರು ಇದ್ದರು.