ಬೆಳಗಾವಿ : ಕರುನಾಡಿನಲ್ಲಿ ಕನ್ನಡಕ್ಕೆ ಅವಮಾನ ಮರಾಠಿಗೆ ಪ್ರೇಮ ಮೆರೆದ ಘಟನೆ ನಡೆದಿದೆ. ಒಂದೆಡೆ ಮಹಾರಾಷ್ಟ್ರ ಸಿಎಂ ಠಾಕ್ರೆ ಬೆಳಗಾವಿ ಗಡಿ ಕ್ಯಾತೆ ತೆಗೆದಿದ್ದರೆ, ಇತ್ತ ರಾಜ್ಯ ಸರ್ಕಾರದ ಸಚಿವರಿಬ್ಬರು ಕನ್ನಡ ನೆಲದಲ್ಲಿ ಮರಾಠಿ ಪ್ರೇಮ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ.
ಇಲ್ಲಿನ ತಾಯಿ-ಮಗು ಆಸ್ಪತ್ರೆ ಉದ್ಘಾಟನೆಗೆ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಅರೋಗ್ಯ ಸಚಿವ ಡಾ.ಸುಧಾಕರ್ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಸ್ವಾಗತ ಕೋರುವುದು ಸೇರಿದಂತೆ ಬಹುತೇಕ ಮರಾಠಿಮಯವಾಗಿತ್ತು. ರಾಜ್ಯದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ನಡದ ಕಡೆಗಣನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ನಿನ್ನೆ ಕರ್ನಾಟಕ ಆಕ್ರಮಿತ ಕೆಲ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿತ್ತು. ಈ ಹೇಳಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು, ಮಾಜಿ ಸಿಎಂ ಸಿದ್ದರಾಮಯ್ಯ , ವಾಟಾಳ್ ನಾಗರಾಜ್, ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯದಾತ್ಯಂತ ಎಲ್ಲಾ ಕನ್ನಡಿಗರು ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಇಂದು ನಡೆದ ಸರ್ಕಾರಿ ಕಾರ್ಯಕ್ರದಲ್ಲಿ ಸ್ವಾಗತ ಕೋರುವುದು ಸೇರಿದಂತೆ ಬಹುತೇಕ ಬಳಸಿರುವುದು ಕನ್ನಡಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.