ಅಬುದಾಬಿ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್ ಗಳ ಗೆಲುವು ದಾಖಲಿಸಿದೆ.
ಆರ್ ಸಿಬಿ ತಂಡ ಸೋತು ಟೂರ್ನಿಯಿಂದ ಹೊರನಡೆದರೆ, ಗೆದ್ದ ಸನ್ ರೈಸರ್ಸ್ ತಂಡ ಕ್ವಾಲಿಫೈಯರ್ ಗೆ ಕಗ್ಗೆಯಿಟ್ಟಿದ್ದು, ಕ್ವಾಲಿಫೈಯರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 132 ರನ್ ಗಳ ಸಾದಾರಣ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ 6 ವಿಕೆಟ್ ಗಳ ಗೆಲುವು ದಾಖಲಿಸಿತು. ಸನ್ ರೈಸರ್ಸ್ ಪರ ನಾಯಕ ಡೇವಿಡ್ ವಾರ್ನರ್-17, ಮನೀಶ್ ಪಾಂಡೆ – 24, ಕೇನ್ ವಿಲಿಯಮ್ಸನ್ -50* ಹಾಗು ಜೇಸನ್ ಹೋಲ್ಡರ್ – 24* ರನ್ ಗಳಿಸಿದರು. ಆರ್ ಸಿಬಿ ಪರ ಮಹಮದ್ ಸಿರಾಜ್ 2, ಆಡಮ್ ಜಂಪಾ ಹಾಗು ಚಾಹಲ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 131 ರನ್ ಗಳ ಸಾದಾರಣ ಮೊತ್ತ ಗಳಿಸಿತು. ಆರ್ ಸಿಬಿ ಪರ ಫಿಂಚ್-32, ಡಿವಿಲಿಯರ್ಸ್-56, ಹಾಗು ಸಿರಾಜ್-10 ರನ್ ಗಳಿಸಿದರು. ಇನ್ನು ಸನ್ ರೈಸರ್ಸ್ ಪರ ಜೇಸನ್ ಹೋಲ್ಡರ್ 3 ವಿಕೆಟ್, ನಟರಾಜನ್ 2, ಹಾಗು ನದೀಮ್ 1 ವಿಕೆಟ್ ಪಡೆದರು.
ಸನ್ ರೈಸರ್ಸ್ ಹೈದರಾಬಾದ್ ಪರ ತಾಳ್ಮೆಯ ಆಟವಾಡಿ ತಂಡದ ಗೆಲುವಿಗೆ ಕಾರಣರಾದ ಕೇನ್ ವಿಲಿಯಮ್ಸನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.