ಬರೋಬ್ಬರಿ 18 ಶಾಸಕರನ್ನು ಹನಿಟ್ರ್ಯಾಪ್‌ಗೆ ಕೆಡವಿದ್ದ ಯುವತಿ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದು, 26 ವರ್ಷದ ಅರ್ಚನಾ ನಾಗ್ 25ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳನ್ನು ಮೋಹ ಜಾಲಕ್ಕೆ ಸಿಲುಕಿಸಿ ಹಣ ವಸೂಲಿ ಮಾಡಿದ್ದಾಳೆ.
ಇನ್ನು, ಈಕೆಯ ಮೋಹ ಪಾಶಕ್ಕೆ ಸಿಲುಕಿದವರಲ್ಲಿ ಬಹುಪಾಲು ಶಾಸಕರು ಒಡಿಶಾದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದು, ಚಿತ್ರ ನಿರ್ಮಾಪಕನನ್ನು ಬಲೆಗೆ ಬೀಳಿಸುವ ಸಂಚು ವಿಫಲವಾದಾಗ ಈಕೆಯ ಹನಿಟ್ರ್ಯಾಪ್ ಕಹಾನಿ ಬಯಲಾಗಿದೆ. ಒಡಿಶಾ ರಾಜಕೀಯದಲ್ಲಿ ಈ ವಿಚಾರ ಈಗ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಹನಿಟ್ರ್ಯಾಪ್ ರಾಣಿಯ ಹೈಫೈ ಲೈಫ್‌ಸ್ಟೈಲ್!
ಒಡಿಶಾದ ಅತ್ಯಂತ ಹಿಂದುಳಿದ ಜಿಲ್ಲೆ ಕಲಹಂಡಿಯಲ್ಲಿ ಹುಟ್ಟಿದ ಅರ್ಚನಾ ನಾಗ್ ಇಂದು ಕೋಟ್ಯಾಧಿಪತಿ. ಬಡತನದ ಬೇಗೆಯಲ್ಲಿ ಬೆಂದ ಈಕೆ ಕಂಡುಕೊಂಡಿದ್ದು ಹನಿಟ್ರ್ಯಾಪ್.
ಹೌದು, 2015ರಲ್ಲಿ ಭುವನೇಶ್ವರದಲ್ಲಿ ನೆಲೆ ಕಂಡುಕೊಂಡಿದ್ದ ಈ ಖತರ್ನಾಕ್ ಲೇಡಿ ಟಾರ್ಗೆಟ್ ಮಾಡಿದ್ದು ಕುಬೇರರನ್ನು. ರಾಜಕಾರಣಿಗಳು, ಉದ್ಯಮಿಗಳು, ಚಿತ್ರ ನಿರ್ಮಾಪಕರನ್ನು ಬಲೆಗೆ ಕೆಡವಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಳು. ಐಷಾರಾಮಿ ಮನೆ, ವಿಲಾಸಿ ಕಾರುಗಳು, ದುಬಾರಿ ಶ್ವಾನಗಳು, ಜೊತೆಗೆ ಬಿಳಿ ಕುದುರೆಯ ಒಡತಿ ಈ ಅರ್ಚನಾ.