ಬೆಂಗಳೂರು: ಮಾರ್ಚ್ 30 ಯುಗಾದಿ ಹಬ್ಬವಿದೆ. ಯುಗಾದಿಯ ಮರುದಿನ ಹೊಸತೊಡಕು ಆಚರಣೆ ಮಾಡಲಾಗುತ್ತದೆ. ಈ ದಿನ ಸಾಮಾನ್ಯವಾಗಿ ಕರ್ನಾಟಕದ ಬಹುತಾಂಶ ಜಿಲ್ಲೆಗಳಲ್ಲಿ ಮಾಂಸಹಾರ ಭೋಜನ ಮಾಡುವ ಪದ್ದತಿ ಇದೆ. ಹೀಗಾಗಿ ಹಿಂದೂ ಬಾಂಧವರು ಹಲಾಲ್ ಮಾಡಿದ ಮಾಂಸದ ಬದಲು, ಹಿಂದೂ ಪದ್ದತಿಯ ಜಟ್ಕಾ ಮಾಂಸ ಖರೀದಿಸುವಂತೆ ಹಿಂದೂ ಜನಜಾಗೃತಿ ಸಮಿತಿಯ ಶರತ್ ಕುಮಾರ್ ಇವರು ಕರೆ ನೀಡಿದ್ದಾರೆ.
ಅವರು ಬೆಂಗಳೂರಿನ ವಿಜಯನಗರದ ವಿವೇಕ ಪಾರ್ಕ್ ನಲ್ಲಿ ನಡೆದ ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಯುಗಾದಿಯ ಮರುದಿನ ಮೈಲಾರ, ಕಾಲಭೈರವ, ಹುಲಿಯರಾಯ, ಬೀರಪ್ಪ ಜಾತರ, ಕುಲದೇವರುಗಳಿಗೆ ಮಾಂಸಹಾರ ಭೋಜನ ನೈವೇದ್ಯ ಮಾಡುವ ಪದ್ದತಿ ಹಿಂದಿನಿಂದ ಇದೆ. ಹಲಾಲ್ ಮಾಡಿದ ಮಾಂಸದಲ್ಲಿ ಮುಸಲ್ಮಾನರು ಪ್ರಾಣಿಬಲಿ ಮಾಡುವಾಗ ಅವರು ಕುರಾನ್ ಕಲ್ಮಾಗಳನ್ನು ಹೇಳಿ, ಪ್ರಾಣಿಯನ್ನು ಮೆಕ್ಕಾ ದಿಕ್ಕಿಗೆ ಮುಖ ಮಾಡಿ, ಅಲ್ಲಹಾನಿಗೆ ಅರ್ಪಣೆ ಮಾಡುತ್ತಾರೆ. ಅದನ್ನೇ ತಂದು ಪುನಃ ಹಿಂದೂ ದೇವರಿಗೆ ಅರ್ಪಿಸುವುದು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ.
ಹಾಗಾಗಿ ಹಿಂದೂ ಸಮಾಜವು ಜಟ್ಕಾ ಮಾಂಸವನ್ನು ಬಳಸಬೇಕೆಂದು ಮನವಿ ಮಾಡುತ್ತಿದ್ದು, ಸರ್ಕಾರವು ಹಿಂದೂಗಳ ಈ ಅಗತ್ಯತೆಯನ್ನು ಗಮನದಲ್ಲಿರಿಸಿ ರಾಜ್ಯದ ಎಲ್ಲ ಕಡೆ ಜಟ್ಕಾ ಮಾಂಸ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದರು.
ಈ ವೇಳೆ ಹಿಂದೂ ಮುಖಂಡ ಎಂ.ಎಲ್.ಶಿವಕುಮಾರ್, ಹಿಂದವೀ ಜಟ್ಕಾ ಮೀಟ್‌ನ ಮಾಲೀಕ ಮುನೆ ಗೌಡ, ಅಖಿಲ ಭಾರತೀಯ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ಡಾ. ಬಿ ಎನ್.ಮಹೇಶ್ ಕುಮಾರ್, ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹಾಜರಿದ್ದರು.