ಮಂಗಳೂರು: ಪ್ರಸ್ತುತ ನಡೆಯುತ್ತಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಭಾಗವಾಗಿ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಅನುಭವದ ಪ್ರಯಾಣವನ್ನು ಪ್ರಾರಂಭಿಸಿದೆ. ಈ ಸವಾರಿ ಮಂಗಳೂರಿನ ಸುಂದರವಾದ ಭೂದೃಶ್ಯದ ವಿಶಿಷ್ಟ ನೋಟವನ್ನು ಜನರಿಗೆ ಉಣಬಡಿಸಲಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬಾ ಮತ್ತು ಅಮಾಯಿ ಮಹಾಲಿಂಗ ನಾಯಕ್ ಅವರು ಹೆಲಿಕಾಪ್ಟರ್ ಸವಾರಿಯ ಆಕರ್ಷಣೆಯನ್ನು ಉದ್ಘಾಟಿಸಿದರು. ಹೆಲಿಕಾಪ್ಟರ್ ಹಾರಾಟದ ಅವಧಿಯು ಆರರಿಂದ ಏಳು ನಿಮಿಷಗಳವರೆಗೆ ಇರುತ್ತದೆ. ನಗರದ ದೃಶ್ಯವು ಗಗನಚುಂಬಿ ಕಟ್ಟಡಗಳು, ಹಸಿರು ಹಾಸಿನ ನಡುವೆ ಸಾಗುವ ಸುಂದರವಾದ ರೈಲ್ವೆ ಹಳಿಗಳು ಮತ್ತು ಕರಾವಳಿಯ ವಿಹಂಗಮ ನೋಟವನ್ನು ಕಟ್ಟಿಕೊಡಲಿದೆ. ಹಸಿರು ಪ್ರದೇಶಗಳು, ಕಡಲತೀರದಲ್ಲಿ ಸಾಲುಗಟ್ಟಿನಿಂತ ದೋಣಿಗಳ ದೃಶ್ಯ ಅದರ ಆಕರ್ಷಣೆಯನ್ನು ಹೆಚ್ಚಿಸಲಿವೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಎಸ್.ಮಾರಿಯಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಸೇರಿದಂತೆ ಅಧಿಕಾರಿ, ಸಿಬ್ಬಂದಿಗಳು ಹೆಲಿಕಾಪ್ಟರ್ ರೈಡ್‌ನ ಆನಂದವನ್ನು ಕಣ್ತುಂಬಿಕೊಂಡರು.
ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಎರಡು ಸ್ಲಾಟ್ಗಳಲ್ಲಿ ಸವಾರಿಗಳು ಲಭ್ಯವಿವೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಹೆಲಿಕಾಪ್ಟರ್ ಸವಾರಿಯ ಪ್ರಾಮುಖ್ಯತೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಒತ್ತಿ ಹೇಳಿದರು. ಅಲ್ಲದೇ ಜನರ ಪ್ರತಿಕ್ರಿಯೆ ಅನುಕೂಲಕರವಾಗಿದ್ದರೆ, ಮಂಗಳೂರನ್ನು ಹತ್ತಿರದ ಜಿಲ್ಲೆಗಳಾದ ಉಡುಪಿ ಮತ್ತು ಚಿಕ್ಕಮಗಳೂರುಗಳ ಪ್ರವಾಸಿ ತಾಣಗಳೊಂದಿಗೆ ಸಂಪರ್ಕಿಸಲು ಸೇವೆಯನ್ನು ವಿಸ್ತರಿಸಬಹುದು ಎಂದು ಹೇಳಿದರು.