ಬೆಂಗಳೂರು: ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಧಾರವಾಡದಲ್ಲಿ ಮಳೆ ಮುಂದುವರೆದಿದ್ದು, ಬೆಳಗಾವಿ ಜಿಲ್ಲೆಯ ನದಿಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕಿನಲ್ಲಿ 9 ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿ ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ರೈತರ ಬೆಳೆಗಳು ಜಲಾವೃತವಾಗಿವೆ.
ಇನ್ನು, ಘಟಪ್ರಭಾ ನದಿ ನೀರಿನಿಂದಾಗಿ ಬಾಗಲಕೋಟೆಯ ಹೊಳೆಬಸವೇಶ್ವರ ದೇಗುಲ ಜಲಾವೃತವಾಗಿದೆ.
ದಕ್ಷಿಣ ಕನ್ನಡದಲ್ಲಿ ಇಂದು ರೆಡ್ ಅಲರ್ಟ್ ಘೋಷಣೆ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನಲೆ ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀದಿದೆ.