ಬೆಂಗಳೂರು: ಕೊರೋನಾ ಸೋಂಕಿನ 2ನೇ ಅಲೆ ಬರದಂತೆ ನೋಡಿಕೊಳ್ಳಲು ಕಠಿಣ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮುನ್ಸೂಚನೆ ನೀಡಿದ್ದಾರೆ.
‘ರಾಜ್ಯದಲ್ಲಿ ದಿನನಿತ್ಯ ನಡೆಯುವ ಮದುವೆ, ಜಾತ್ರೆ, ಪ್ರತಿಭಟನೆಗಳಲ್ಲಿ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿಲ್ಲ. ಇನ್ಮುಂದೆ ಮದುವೆ ಸಮಾರಂಭಗಳಲ್ಲಿ ಒಬ್ಬೊಬ್ಬ ಮಾರ್ಷಲ್ ಹಾಕಲು ತೀರ್ಮಾನ ಮಾಡಿದ್ದೇವೆ. ಇಲ್ಲಿ 500ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಈ ಸಂಬಂಧ ಶೀಘ್ರದಲ್ಲೇ ಆದೇಶ ಹೊರಡಿಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.
ಒಂದೇ ಕಡೆ 5 ಜನರಿಗೆ ಪಾಸಿಟಿವ್ ಬಂದರೆ ಕಂಟೈನ್‌ಮೆಂಟ್ ಝೋನ್!
ಇನ್ನು ಒಂದೇ ಸ್ಥಳದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್ ಬಂದರೆ ಅದನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ನಿಯಮ ಈಗಾಗಲೇ ಇದೆ. ಅದನ್ನೀಗ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆಯನ್ನು ತಡೆಯಲು ಈ ರೀತಿ ಮಾಡಲಾಗುತ್ತಿದೆ. ಕಲಬುರಗಿ, ದ.ಕ, ಬೆಂಗಳೂರಿನಲ್ಲಿ ಪಾಸಿಟಿವ್ ರೇಟ್ ಜಾಸ್ತಿ ಇದೆ ಎಂದು ಸಚಿವರು ತಿಳಿಸಿದ್ದಾರೆ.