ಬೆಂಗಳೂರು : ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಕೆಲವರು ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು, ಬೀದಿ ಬೀದಿಯಲ್ಲಿ ಹಣ ಸಂಗ್ರಹ ಮಾಡುತ್ತಿರುವ ಪೋಲಿ ಪುಂಡರಿಗೆ ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. ಇದನ್ನು ತಡೆಯುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ದೇಣಿಗೆಗಾಗಿ ನನಗೆ ಬೆದರಿಕೆ ಹಾಕಲಾಗಿದೆ: ಎಚ್ ಡಿಕೆ
ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ, ದೇಣಿಗೆಗಾಗಿ ನನಗೆ ಬೆದರಿಕೆ ಹಾಕಲಾಗಿದೆ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ದೇಣಿಗೆಗಾಗಿ ನಮ್ಮ ಮನೆಗೆ ಪ್ರತಿನಿತ್ಯ ಓರ್ವ ಹೆಣ್ಣು ಮಗಳು ಸೇರಿ 3 ತಂಡ ಬರುತ್ತಿವೆ. ಏನಪ್ಪಾ ಇದು ಎಂದು ಪ್ರಶ್ನಿಸಿದರೆ, ದೇಶದ ಪ್ರತೀಕ ಎಂದು ನನಗೇ ಬೆದರಿಕೆ ಹಾಕುತ್ತಾರೆ. ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನಾಗಬೇಕು ಎಂದು ಎಚ್ ಡಿಕೆ ಪ್ರಶ್ನಿಸಿದ್ದಾರೆ.