ಕೊರೋನಾ ಲಸಿಕೆ ಪಡೆದ ಬಳಿಕ ಚುಚ್ಚಿದ ಜಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಸಹಜ, ಜ್ವರ, ಚಳಿ ಕೂಡ ಬರಬಹುದಾಗಿದ್ದು, ಇದರಿಂದ ಆತಂಕಕ್ಕೆ ಒಳಗಾಗುವ, ಭಯ ಬೀಳುವ ಅವಶ್ಯಕತೆ ಇಲ್ಲ.
ಸಾಮಾನ್ಯವಾಗಿ ಲಸಿಕೆ ಪಡೆದ 48 ಗಂಟೆಗಳಲ್ಲಿ ಇದು ಶಮನವಾಗಲಿದ್ದು, ಒಂದು ವೇಳೆ 48 ಗಂಟೆಗಳ ಬಳಿಕವೂ ಜ್ವರ ಅಥವಾ ಅನಾರೋಗ್ಯ ಲಕ್ಷಣಗಳಿದ್ದರೆ ಅಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಯಾವಾಗ ಲಸಿಕೆ ಪಡೆಯಬೇಕು?:
ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಯಾವಾಗ ಲಸಿಕೆ ಪಡೆದುಕೊಳ್ಳಬೇಕು? ಎಂಬ ಗೊಂದಲ ಅನೇಕರಲ್ಲಿದೆ. ಹೀಗಾಗಿ, ತಜ್ಞರು ಇದಕ್ಕೆ ಸಂಬಂಧಪಟ್ಟಂತೆ ಸಲಹೆ ನೀಡಿದ್ದು, ಸೋಂಕಿಗೆ ಒಳಗಾಗಿ ಗುಣಮುಖರಾದ ಅನಂತರ ಮೂರು ತಿಂಗಳ ಬಳಿಕ ಕೊರೋನಾ ಲಸಿಕೆ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಒಂದು ಬಾರಿ ಸೋಂಕಿಗೆ ಒಳಗಾದವರಿಗೆ ಮರಳಿ ಕೊರೋನಾ ಬರುವುದಿಲ್ಲ ಎಂಬ ಭಾವನೆ ಬೇಡ. ಅವರು ಮತ್ತೆ ಸೋಂಕಿಗೆ ತುತ್ತಾಗುವ ಸಾಧ್ಯತೆಗಳಿದ್ದು, ಅಗತ್ಯ ಮುಂಜಾಗ್ರತೆ ವಹಿಸಿ ಎಂದು ತಜ್ಞರು ಹೇಳಿದ್ದಾರೆ.
ಅಲರ್ಜಿ ಹೊಂದಿರುವ ಜನರು ಲಸಿಕೆ ಪಡೆಯಬಹುದೇ?:
ಇಂದಿಗೂ ಅನೇಕರಲ್ಲಿ ಲಸಿಕೆ ಕುರಿತು ಅನುಮಾನಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಅಲರ್ಜಿಯಂತಹ ಲಕ್ಷಣವಿರುವವರು ಲಸಿಕೆ ಪಡೆಯಬಹುದೇ ಎಂದು ಅನುಮಾನಿಸುತ್ತಿದ್ದಾರೆ. ಆದರೆ ಇದಕ್ಕೆ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಉತ್ತರಿಸಿದ್ದು, ‘ಅಲರ್ಜಿ ಸಮಸ್ಯೆ ಇದ್ದರೆ, ವೈದ್ಯಕೀಯ ಸಲಹೆಯ ನಂತರವೇ ಲಸಿಕೆಯನ್ನು ತೆಗೆದುಕೊಳ್ಳಬೇಕು. ಆದರೆ, ಸಾಮಾನ್ಯ ಶೀತ, ಚರ್ಮದಂತ ಸಣ್ಣ ಅಲರ್ಜಿ ಪ್ರಶ್ನೆಯಾಗಿದ್ದರೆ, ಲಸಿಕೆಯನ್ನು ತೆಗೆದುಕೊಳ್ಳಬಹುದು’ ಎಂದು ಹೇಳಿದ್ದಾರೆ.