ಜೈಪುರ: ರಾಜಸ್ಥಾನದ ಬ್ಯಾವರ್ ಜಿಲ್ಲೆಯ ರಾಸಾಯನಿಕ ಕಾರ್ಖಾನೆಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್ನಿಂದ ವಿಷಕಾರಿ ಅನಿಲ ಸೋರಿಕೆಯಾಗಿ ಮೂವರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರ್ಖಾನೆಯ ಮಾಲೀಕ ಮತ್ತು ಇತರ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಬದಿಯಾ ಪ್ರದೇಶದ ವಸತಿ ಪ್ರದೇಶದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಖಾನೆಯಲ್ಲಿ ನೈಟ್ರಿಕ್ ಆಮ್ಲ ಸೋರಿಕೆಯಿಂದಾಗಿ ಸೋಮವಾರ ತಡರಾತ್ರಿ 53 ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಮಹೇಂದ್ರ ಖಡ್ಗಾವತ್ ಹೇಳಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸಿಂಗ್ ಅವರ ಪ್ರಕಾರ, ಸುತ್ತಮುತ್ತಲಿನ ಹಲವಾರು ಜನರು ಅನಿಲವನ್ನು ಉಸಿರಾಡಿದ ನಂತರ ಅನಾರೋಗ್ಯಕ್ಕೆ ಒಳಗಾದರು, ಬಳಿಕ ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
ಕಾರ್ಖಾನೆಯ ಮಾಲೀಕ ಸುನಿಲ್ ಸಿಂಘಾಲ್(47) ಸೋಮವಾರ ರಾತ್ರಿ ಸಾವನ್ನಪ್ಪಿದ್ದರೆ, ಸ್ಥಳೀಯ ನಿವಾಸಿಗಳಾದ ದಯಾರಾಮ್ (52) ಮತ್ತು ನರೇಂದ್ರ ಸೋಲಂಕಿ (40) ಮಂಗಳವಾರ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ಉಸಿರಾಟದ ತೊಂದರೆ, ಎದೆಯಲ್ಲಿ ಭಾರ ಮತ್ತು ವಾಂತಿ ಬಗ್ಗೆ ದೂರು ನೀಡಿದ ನಂತರ ಈ ಪ್ರದೇಶದ ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ಇಬ್ಬರು ಅಜ್ಮೀರ್ನ ಜೆಎಲ್ಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳ ಸಮೀಕ್ಷೆ ನಡೆಸಲು ನಗರ ಪರಿಷತ್, ಕಂದಾಯ ಇಲಾಖೆ ಮತ್ತು ಪೊಲೀಸರ ಅಧಿಕಾರಿಗಳ ಸಮಿತಿಯನ್ನು ರಚಿಸಲು ಜಿಲ್ಲಾಧಿಕಾರಿ ಖಡ್ಗಾವತ್ ಆದೇಶಿಸಿದ್ದಾರೆ.