ಬೆಂಗಳೂರು :ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನದ ಖಂಡಿಸಿ ಮಾಜಿ ಸಂಸದೆ ರಮ್ಯಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.
‘ಆಕೆ ಮುಗ್ಧೆ, ರೈತರ ಪರ ಹೋರಾಡುವುದು ಕ್ರೈಂ ಅಲ್ಲ’ : ರಮ್ಯಾ
ಪರಿಸರ ಹೋರಾಟಗಾರ್ತಿ ದಿಶಾ ರವಿ ಬಂಧನಕ್ಕೆ ಸಂಬಂಧಿಸಿ ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ’21 ವರ್ಷದ ದಿಶಾ ರವಿ ಬೆಂಗಳೂರು ಹುಡುಗಿ, ಕನ್ನಡತಿ, ಪರಿಸರ ಹೋರಾಟಗಾರ್ತಿ, ಆಕೆ ಮುಗ್ಧೆ, ರೈತರ ಬೆಂಬಲಕ್ಕೆ ನಿಲ್ಲುವುದು ಕ್ರೈಂ ಅಲ್ಲ. ನಾನು ರೈತ ಸರ್ಕಾರದ ಬಳಿ ಮನವಿಮಾಡುತ್ತೇನೆ. ನಾವು ಅವಳ ಪರ ನಿಲ್ಲಬೇಕು’ ಎಂದು ರಮ್ಯಾ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕಿದ್ದಾರೆ.
ದಿಶಾ ರವಿ ಪರ ಧ್ವನಿಯೆತ್ತಿದ ಡಿ.ಕೆ ಶಿವಕುಮಾರ್:
ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಧ್ವನಿಯೆತ್ತಿದ್ದು, ಭಾರತದ ಯುವಕರ ನೈತಿಕ ಬಲವನ್ನು ದುರ್ಬಲಗೊಳಿಸುವ ಸೂಚನೆ, ದಿಶಾ ರವಿ ವಿರುದ್ಧ ಪೊಲೀಸ್ ಕ್ರಮ ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಡಿಕೆಶಿ, ‘ಒಂದು ‘ಟೂಲ್‌ಕಿಟ್’ ಪಿತೂರಿಯನ್ನು ಬಳಸುವುದು ಕಾನೂನಿನ ನಿಯಮಗಳ ಉಲ್ಲಂಘನೆ, ಯುವತಿಯನ್ನು ಬಂಧಿಸುವ ಮೊದಲು ನ್ಯಾಯಾಲಯವನ್ನು ಸಂಪರ್ಕಿಸಲಿಲ್ಲವೇಕೆ’ ಎಂದು ಪ್ರಶ್ನಿಸಿದ್ದಾರೆ.
ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ: ಎಂ.ಲಕ್ಷ್ಮಣ್
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಇಂದು ಮೈಸೂರಿನಲ್ಲಿ ಮಾತನಾಡಿದ್ದು, ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶಾದ್ಯಂತ 800 ದೇಶದ್ರೋಹ ಪ್ರಕರಣ ದಾಖಲಾಗಿವೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದಲ್ಲಿ ಅಂಥವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ದಿಶಾ ರವಿ ಬಂಧನ. ಬಿಜೆಪಿಯವರಿಗೆ ಹೆಣ್ಣು ಮಕ್ಕಳ ಮೇಲೆ ಗೌರವವಿಲ್ಲ. ಹಾಗಾಗಿ ಯುವಕ, ಯುವತಿಯರು ಬಿಜೆಪಿ ನೀತಿ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.