ಕಾಂಗ್ರೆಸ್ ಯುವ ನಾಯಕಿ ನವ್ಯಶ್ರಿ ರಾಮಚಂದ್ರರಾವ್ ಸೇರಿದಂತೆ ಇಬ್ಬರ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಎಂಬವರು ನವ್ಯಶ್ರೀ ವಿರುದ್ಧ ಹನಿಟ್ರ್ಯಾಪ್, ಸುಳ್ಳು ಕೇಸ್, ಮಾನಸಿಕ ಹಿಂಸೆ, ಜೀವ ಬೆದರಿಕೆ ಇದೆ ಎಂದು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಯಾರು ಈ ನವ್ಯಶ್ರೀ ರಾಮಚಂದ್ರರಾವ್?
ಚನ್ನಪಟ್ಟಣ ಮೂಲದ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ರಾಮಚಂದ್ರರಾವ್ ವಿರುದ್ಧ ಹನಿಟ್ರ್ಯಾಪ್ ಆರೋಪ ಕೇಳಿಬಂದಿದೆ. NGO ನಡೆಸುತ್ತಿರುವ ನವ್ಯಶ್ರೀ, ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಅವರು ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರ PS ಆಗಿದ್ದಾಗ, ಇಬ್ಬರ ನಡುವೆ ಪರಿಚಯವಾಗಿತ್ತು. ಆಗ ಇಬ್ಬರ ನಡುವೆ ಪ್ರೀತಿ ಉಂಟಾಗಿ, ಮದುವೆ ಕೂಡ ಆಗಿದ್ದರು ಎಂದು ಹೇಳಲಾಗುತ್ತಿದೆ.
ಆದರೆ, ಇದೀಗ ರಾಜಕುಮಾರ್ ಟಾಕಳೆ ನವ್ಯಶ್ರೀ ವಿರುದ್ಧ ಬ್ಲ್ಯಾಕ್ ಮೇಲ್ ಹಾಗೂ 2 ಲಕ್ಷ ರೂಪಾಯಿ ಹಣ ಪಡೆದಿರುವ ಬಗ್ಗೆ ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ನವ್ಯಶ್ರೀ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ವರದಿಯಾಗಿದೆ. ಇನ್ನು, ಕಾಂಗ್ರೆಸ್ ಯುವ ನಾಯಕಿ ನವಶ್ರೀ ಹನಿಟ್ರ್ಯಾಪ್ ಮೂಲಕ ಬೆದರಿಕೆ ಹಾಕಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದ್ದು, ಹಲವು ನಾಯಕರ ಜೊತೆಗಿನ ಫೋಟೋಗಳು ವೈರಲ್ ಆಗಿವೆ.