ಅರಸೀಕೆರೆ: ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶುಕ್ರವಾರ ವಿಜಯ ದಶಮಿಯ ಬನ್ನಿ ಮುಡಿಯುವ ಹಬ್ಬದ ಅಂಗವಾಗಿ ದೇವರ ಬಂಡಿ ಓಡಿಸುವ ಕಾರ್ಯ ಈ ಬಾರಿಯೂ ಸಂಭ್ರಮ, ಸಡಗರದಿಂದ ನೆರವೇರಿತು.
ಹೌದು, ಪ್ರತಿವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ದೇವರ ಬಂಡಿ ಓಡಿಸುವ ಕಾರ್ಯ ಕೊರೊನಾ ಹಿನ್ನೆಲೆ, ಈ ವರ್ಷ ಸರಳವಾಗಿ ನೆರವೇರಿತು. ಇನ್ನು ಈ ಹಬ್ಬದ ಅಂಗವಾಗಿ ವಿಶೇಷವಾಗಿ ಎತ್ತುಗಳ ಅಲಂಕಾರ ಮಾಡಿ ದೇಗುಲದಲ್ಲಿರುವ ಬಂಡಿಗೆ ಎತ್ತುಗಳನ್ನು ಕಟ್ಟಿ ಗ್ರಾಮದ ಹೊರವಲಯದ ಬನ್ನಿ ಮರದವರೆಗೂ ಓಡಿಸಲಾಯಿತು.
ಗಮನ ಸೆಳೆದ ಎತ್ತಿನ ಬಂಡಿ ಓಟ
ಇನ್ನು, ಬನ್ನಿ ಹಬ್ಬದ ಪ್ರಯುಕ್ತ ಗ್ರಾಮದ ಯುವಕರು, ಗ್ರಾಮಸ್ಥರು ದೇವರ ಬಂಡಿ ಜೊತೆ ಓಡಿ ಸಂಭ್ರಮಿಸಿದರು. ನಂತರ ಗ್ರಾಮಸ್ಥರು ಗ್ರಾಮಕ್ಕೆ ಬನ್ನಿಯನ್ನು ತಂದು ಒಬ್ಬರಿಗೊಬ್ಬರು ಬನ್ನಿ ನೀಡಿ ಪರಸ್ಪರ ಬನ್ನಿ ಹಬ್ಬದ ಶುಭ ಕೋರಿ ಸಂಭ್ರಮಿಸಿದರು. ಇನ್ನು ದಸರಾ ಪ್ರಯುಕ್ತ ದೇವರ ಬಂಡಿ ಓಡಿಸುವ ಸಂದರ್ಭದಲ್ಲಿ ಗ್ರಾಮದ ಮುಖಂಡರು ಸಹ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ದೇವರ ಪಲ್ಲಕ್ಕಿ ಹೊತ್ತುಕೊಂಡು ಹೋಗುವ ದೃಶ್ಯ
ಹಬ್ಬದ ವಿಶೇಷತೆ:
ವಿಜಯ ದಶಮಿಯ ಬನ್ನಿ ಮುಡಿಯುವ ಹಬ್ಬದ ಅಂಗವಾಗಿ ಅರಸೀಕೆರೆ ಗ್ರಾಮದಲ್ಲಿ ದೇವರ ಬಂಡಿ ಓಡಿಸುವ ಕಾರ್ಯ ಪ್ರತಿ ವರ್ಷವೂ ನಡೆಯುತ್ತದೆ. ದೇವರ ಬಂಡಿಯನ್ನು ಗ್ರಾಮದ ಹೊರವಲಯದ ಬನ್ನಿ ಮರದವರೆಗೂ ಓಡಿಸಲಾಗುವುದು. ನಂತರ ಅಲ್ಲಿಂದ ಬಂಡಿಯೂ ಅರಸೀಕೆರೆ ಗ್ರಾಮದ ಬಳಿ ಅಡವಿ ಮಲ್ಲಾಪುರದ ಹತ್ತಿರ ಇರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ (ಕಣಿಸಿದ್ದೇಶ್ವರ) ಹೋಗಿ ಬನ್ನಿ ಮುಡಿಯುವುದು ಈ ಹಬ್ಬದ ವಿಶೇಷವಾಗಿದೆ.
ಇನ್ನು, ಈ ಹಬ್ಬದ ಪ್ರಯುಕ್ತ ಪ್ರತಿವರ್ಷವೂ ಈ ದೇವಸ್ಥಾನದಲ್ಲಿ ಕಾರ್ಣಿಕ ನುಡಿ ನುಡಿಯುವುದು ವಿಶೇಷತೆಯಾದ್ದು, ಈ ಕಾರ್ಣಿಕ ನುಡಿಯನ್ನು ವರ್ಷದ ಭವಿಷ್ಯವಾಣಿ ಎಂದೇ ಭಕ್ತರ ನಂಬಿಕೆಯಾಗಿದೆ.