ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ರಾಜನ್ (87) ಅವರು ಹೃದಯಾಘಾತದಿಂದ ನಿನ್ನೆ ವಿಧಿವಶರಾಗಿದ್ದಾರೆ. ಸಿನಿಮಾ ರಂಗದಲ್ಲಿ ರಾಜನ್-ನಾಗೇಂದ್ರ ಎಂದು ಸಹೋದರ ಜೋಡಿ ಖ್ಯಾತಿ ಪಡೆದಿತ್ತು.
ಮೂಲತಃ ಮೈಸೂರಿನವರಾದ ರಾಜನ್, ಸಹೋದರ ನಾಗೇಂದ್ರ ಅವರೊಂದಿಗೆ ಸೇರಿ ‘ರಾಜನ್-ನಾಗೇಂದ್ರ’ ಹೆಸರಿನಲ್ಲಿ 1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 5 ದಶಕಗಳ ಕಾಲ ಕನ್ನಡದಲ್ಲಿ ಇನ್ನೂರಕ್ಕೂ ಹೆಚ್ಚು ಸೇರಿದಂತೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ಹಲವಾರು ಭಾಷೆಗಳಲ್ಲಿ ಸುಮಾರು 375ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ರಾಜನ್ ಅವರು ಗಂಧದ ಗುಡಿ, ಎರಡು ಕನಸು, ನಾ ನಿನ್ನ ಮರೆಯಲಾರೆ, ಬಯಲು ದಾರಿ, ಗಿರಿಕನ್ಯೆ, ಹೊಂಬಿಸಿಲು, ಪಾವನ ಗಂಗಾ ಹಲವು ಸಿನಿಮಾಗಳು ಸೇರಿದಂತೆ ಡಾ : ರಾಜ್ ಕುಮಾರ್ ಸೇರಿ ಅನೇಕ ನಟರ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಎರಡು ಕನಸು, ಪರಸಂಗದ ಗೆಂಡೆತಿಮ್ಮ ಸಿನಿಮಾದ ಉತ್ತಮ ಸಂಗೀತ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ಲಭಿಸಿತ್ತು.
ರಾಜನ್ ಅವರ ಸೋದರ ನಾಗೇಂದ್ರ ಅವರು ನವಂಬರ್ 2000 ರಂದು ಪಾರ್ಶ್ವವಾಯುವಿನಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಈಗ ರಾಜನ್ ನಿಧನರಾಗಿದ್ದು, ಇಂದು ಅವರ ಅಂತ್ಯಕ್ರಿಯೆ ಹೆಬ್ಬಾಳದ ಸ್ಮಶಾನದಲ್ಲಿ ನೆರವೇರಿಸಲಾಗುತ್ತದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.