BPL card cancelled | ಕರ್ನಾಟಕದಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್‌ಗಳು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಜೀವನಾಡಿ. ಆದರೆ ಈಗ ಹೊಸ ಸಮಸ್ಯೆ ತಲೆದೋರಿದೆ. ಕುಟು೦ಬದ ಒಬ್ಬರು ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿದರೂ ಸಾಕು ಇಡೀ ಕುಟುಂಬದ ರೇಷನ್ ಕಾರ್ಡ್‌ನ್ನು ಸಾಫ್ಟ್‌ವೇರ್ ‘ಅನರ್ಹ’ ಎಂದು ಗುರುತಿಸಿ ರದ್ದುಗೊಳಿಸುತ್ತಿದೆ. ಆಧಾರ್-ಪ್ಯಾನ್- ಐಟಿ ಡೇಟಾಬೇಸ್‌ಗಳು ಪರಸ್ಪರ ಲಿಂಕ್ ಆಗಿರುವುದರಿ೦ದ ಸಿಸ್ಟಂ ಇದನ್ನು ಸ್ವಯಂಚಾಲಿತವಾಗಿ ಮಾಡುತ್ತಿದೆ. ಇದರ ಪರಿಣಾಮವಾಗಿ ಸಾವಿರಾರು ಕುಟುಂಬಗಳಲ್ಲಿ ಉಚಿತ ಅಕ್ಕಿ, ಗೃಹಲಕ್ಷ್ಮೀ ₹2,000, ಉಚಿತ ವಿದ್ಯುತ್, ಶಕ್ತಿ ಯೋಜನೆಯ ಬಸ್ ಪಾಸ್ ಸೌಲಭ್ಯಗಳು ನಿಂತುಹೋಗಿವೆ.
ಎರಡೇ ತಿಂಗಳಲ್ಲಿ 9,000 ಕಾರ್ಡ್ ರದ್ದು
ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ಸಮಸ್ಯೆ ಭಯಾನಕವಾಗಿದೆ. ಕೇವಲ ಸೆಪ್ಟೆಂಬರ್-ಅಕ್ಟೋಬರ್ 2025ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಮಾತ್ರ 9,000ಕ್ಕೂ ಹೆಚ್ಚು ಕಾರ್ಡ್‌ಗಳು ರದ್ದಾಗಿವೆ. ಸಿಂಧನೂರು, ರಾಯಚೂರು ಗ್ರಾಮಾಂತರ, ಮಾನ್ವಿ, ಲಿಂಗಸುಗೂರು, ದೇವದುರ್ಗ ಎಲ್ಲೆಡೆ ಸಾವಿರಾರು ಕಾರ್ಡ್‌ಗಳು ಒಂದೇ ಕಾರಣಕ್ಕೆ ಬ್ಲಾಕ್ ಆಗಿವೆ. ರಾಜ್ಯಾದ್ಯಂತ ಈ ಸಂಖ್ಯೆ ಲಕ್ಷಾಂತರದಲ್ಲಿದೆ ಎನ್ನುವುದು ಅಧಿಕಾರಿಗಳ ಅಂದಾಜು. ಮೂವರು, ನಾಲ್ವರು ಸದಸ್ಯರ ಕುಟು೦ಬ ನಡೆಸುತ್ತಿರುವ ಬಡ ಮನೆಗಳಿಗೆ ಇದು ನಿಜವಾದ ಸಂಕಟ.
ಒಬ್ಬನ ಆದಾಯ ಇಡೀ ಕುಟುಂಬದ ಆದಾಯವಲ್ಲ
ಸಿಸ್ಟಂ ರದ್ದುಗೊಳಿಸುವ ಮಾರ್ಗದರ್ಶನದಲ್ಲಿ ದೊಡ್ಡ ಅನ್ಯಾಯ ಕ೦ಡುಬರುತ್ತಿದ್ದು, ಕುಟು೦ಬದ ಒಬ್ಬ ಯುವಕ ಖಾಸಗಿ ಉದ್ಯೋಗದಲ್ಲಿ ಇದ್ದು ITR ಸಲ್ಲಿಸಿದರೆ, ಅವನ ತಾಯಿ- ತಂದೆ, ಸಹೋದರ- ಸಹೋದರಿ, ಪತ್ನಿ, ಮಕ್ಕಳು ಎಲ್ಲರ ಬಿಪಿಎಲ್ ಕಾರ್ಡ್ ಒಂದೇ ಬಾರಿ ರದ್ದು ಆಗುತ್ತಿದೆ.
ಸಿಂಧನೂರಿನ ರೈತ ಕೂಲಿ ಶ೦ಕರಮ್ಮ ಹೇಳುವ೦ತೆ: ಮಗ ತೆರಿಗೆ ಕಟ್ಟುತ್ತಾನೆ, ಆದರೆ ನಮ್ಮ ಮನೆಯಲ್ಲಿ ಬೇರೆ ಆದಾಯವೇ ಇಲ್ಲ. ಅಂತ್ಯೋದಯ ಕಾರ್ಡ್ ರದ್ದಾಗಿದ್ದು ತಿಂಗಳಿಗೆ 35 ಕೆ.ಜಿ. ಉಚಿತ ಅಕ್ಕಿ ನಿಂತಿದೆ ಎಂದಿದ್ದಾರೆ.
ಹೊಸ ಕಾರ್ಡ್ ನೀಡದ ಸರ್ಕಾರ
ಕೇವಲ ರದ್ದುಗೊಳಿಸುವುದಷ್ಟೇ ಅಲ್ಲ, ಹೊಸ ಬಿಪಿಎಲ್/ಎಪಿಎಲ್ ಕಾರ್ಡ್‌ಗಳನ್ನು ಸರ್ಕಾರ 2013-14 ರಿಂದ ನೀಡಲೇ ಇಲ್ಲ. ಮದುವೆಯಾಗಿರುವವರು, ಪ್ರತ್ಯೇಕ ಮನೆ ಕಟ್ಟಿಕೊಂಡವರು, ಹೊಸ ಕುಟುಂಬ ಆರ೦ಭಿಸಿದವರು ಎಲ್ಲರೂ ಹಳೆಯ ಕಾರ್ಡ್‌ನಲ್ಲೇ ಹೆಸರು ಉಳಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕುಟು೦ಬದ ಒಬ್ಬರ ತೆರಿಗೆ ಪಾವತಿ ಇಡೀ ಮನೆತನವನ್ನು ಅನರ್ಹರನ್ನಾಗಿ ಮಾಡುತ್ತಿದೆ. NFSA ನಿಯಮಗಳಡಿ ಇದು ‘ಸ್ವಯಂಚಾಲಿತ ಪ್ರಕ್ರಿಯೆ’ ಎ೦ದು ಇಲಾಖೆಯವರು ಕೈಕಚ್ಚಿಕೊಂಡಿದ್ದಾರೆ. ಆದರೆ ಜನರ ಪರದಾಟ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ತಕ್ಷಣದ ಪರಿಹಾರದ ಬೇಡಿಕೆ
ಜನರು ಸರ್ಕಾರದ ಮುಂದೆ ಹಲವಾರು ಬೇಡಿಕೆಗಳನ್ನು ಇಟ್ಟಿದ್ದಾರೆ. ತೆರಿಗೆ ಕಟ್ಟುವ ಸದಸ್ಯರ ಹೆಸರನ್ನು ಮಾತ್ರ ತೆಗೆದು ಉಳಿದವರಿಗೆ ಕಾರ್ಡ್ ಮುಂದುವರಿಸಬೇಕು, ತುರ್ತು ಕಾರ್ಡ್ ಪುನರ್‌ಸ್ಥಾಪನೆ, ಹೊಸ ಕಾರ್ಡ್ ಅರ್ಜಿಗಳನ್ನು ಪ್ರಾರಂಭಿಸಬೇಕು, ಪ್ರತ್ಯೇಕ ಕುಟುಂಬಕ್ಕೆ ಸೆಲ್ಸ್‌ಡಿಕ್ಲರೇಶನ್ ಆಧಾರದಲ್ಲಿ ಕಾರ್ಡ್ ನೀಡಬೇಕು, ಹಾಗೂ ಆದಾಯ ಗಡಿಯನ್ನು ₹5-7 ಲಕ್ಷಕ್ಕೆ ಏರಿಸಬೇಕು. ವಿಷಯ ಈಗ ರಾಜಕೀಯವಾಗಿ ಬಿಸಿಯಾಗಿದ್ದು, ಮು೦ದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ಜೋರಾಗುವ ಸಾಧ್ಯತೆ ಇದೆ.




