ಬೆಳಗಾವಿ: ಬೆಳಗಾವಿಯಲ್ಲಿ ತಮ್ಮನ್ನು ಬಿಟ್ಟು ನಡೆಸಿದ ಸಭೆ ಕುರಿತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿದ್ದಾರೆ. ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯ ವೈಮನಸ್ಸುಗಳು ಇದ್ದೇ ಇರುತ್ತವೆ. ಇದನ್ನು ಪಕ್ಷದ ಹಿರಿಯ ನಾಯಕರು ಬಗೆಹರಿಸಬೇಕು. ಅಲ್ಲದೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ.
ಹಾಗಾಗಿ ಒಬ್ಬರ ಮೇಲೊಬ್ಬರು ದೂರುವುದು ಸರಿಯಲ್ಲ. ಹಾಗೇನಾದರೂ ಸಮಸ್ಯೆಗಳಿದ್ದರೆ ಹಿರಿಯ ನಾಯಕರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಆ ಸಭೆ ಅಧಿಕೃತವೋ, ಅನಧಿಕೃತವೋ ನಮಗೂ ಗೊತ್ತಿಲ್ಲ ಎಂದಿದ್ದಾರೆ.
ಆ 17 ಜನರನ್ನು ಮರೆಯಬೇಡಿ:
ನಮ್ಮನ್ನು ನೀವು ಬದಿಗೊತ್ತಿದ್ದೀರೋ, ಇಲ್ಲವೋ ಗೊತ್ತಿಲ್ಲ. ಆದರೆ ಅಧಿಕಾರ ಕೊಟ್ಟವರನ್ನು ನೀವು ಮರೆಯಬೇಡಿ ಎಂದು ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ವಿರೋಧಿಗಳಿಗೆ ನಯವಾಗಿಯೇ ಟಾಂಗ್ ನೀಡಿದ್ದಾರೆ.
ಬೆಳಗಾವಿಯ ಗೋಕಾಕ್ ನಲ್ಲಿ ಮಾತನಾಡಿದ ಅವರು, ಇತರೆ ಪಕ್ಷಗಳಿಂದ 17 ಜನ ಬರದಿದ್ದಲ್ಲಿ ನೀವು ಮಂತ್ರಿ, ಉಪ ಮುಖ್ಯಮಂತ್ರಿಗಳಾಗುತ್ತಿರಲಿಲ್ಲ. ರಾಜ್ಯಸಭೆಗೂ ಹೋಗುತ್ತಿರಲಿಲ್ಲ ಎಂದು ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಲಕ್ಷ್ಮಣ್ ಸವದಿ & ಈರಣ್ಣ ಕಡಾಡಿಗೆ ಎಚ್ಚರಿಕೆ ನೀಡಿದ್ದಾರೆ.