ಪಣಜಿ: ಉತ್ತರ ಗೋವಾದ ಧರ್ಗಲ್ ಗ್ರಾಮದಲ್ಲಿ ನಡೆದ ಸನ್ಬರ್ನ್ ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಫೆಸ್ಟಿವಲ್ನಲ್ಲಿ ಭಾಗವಹಿಸುವಾಗ ದೆಹಲಿಯ ನಿವಾಸಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಮೃತರನ್ನು ಪಶ್ಚಿಮ ದೆಹಲಿಯ ರೋಹಿಣಿ ನಿವಾಸಿ ಕರಣ್ ಕಶ್ಯಪ್(26) ಎಂದು ಗೋವಾ ಪೊಲೀಸ್ ವಕ್ತಾರರು ಗುರುತಿಸಿದ್ದಾರೆ.
ಶನಿವಾರ ರಾತ್ರಿ 9:45ರ ಸುಮಾರಿಗೆ ಈ ಘಟನೆ ನಡೆದಿದೆ. ಕುಸಿದುಬಿದ್ದು ಪ್ರಜ್ಞೆ ಕಳೆದುಕೊಂಡ ಕಶ್ಯಪ್ ಅವರನ್ನು ತಕ್ಷಣವೇ ಮಾಪುಸಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಮತ್ತು ಯಾವುದೇ ಅಕ್ರಮ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.