ಚೆನ್ನೈ : ಎಂ ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 14 ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮುಂಬೈ ಇಂಡಿಯನ್ಸ್ ನೀಡಿದ 138 ರನ್ ಗಳ ಸಾದಾರಣ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ , ಆರಂಭಿಕ ಆಟಗಾರ ಶಿಖರ್ ದವನ್ (45 ರನ್, 42 ಎಸೆತ), ಸ್ಟಿವ್ ಸ್ಮಿತ್ (33 ರನ್, 29 ಎಸೆತ), ಲಲಿತ್ ಯಾದವ್ (22 ರನ್, 25 ಎಸೆತ) ಅವರ ಆಟದ ನೆರವಿನಿಂದ 19.1 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿ 6 ವಿಕೆಟ್ ಗಳ ಸುಲಭ ಜಯಗಳಿಸಿತು. ಮುಂಬೈ ತಂಡದ ಪರ ಜಯಂತ್ ಯಾದವ್, ಬುಮ್ರಾ, ರಾಹುಲ್ ಚಾಹರ್ ಹಾಗು ಪೊಲಾರ್ಡ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾ (44 ರನ್, 30 ಎಸೆತ), ಸೂರ್ಯಕುಮಾರ್ ಯಾದವ್ (24 ರನ್, 15 ಎಸೆತ), ಇಶಾನ್ ಕಿಶನ್ (26 ರನ್, 28 ಎಸೆತ), ಜಯಂತ್ ಯಾದವ್ (23 ರನ್, 22 ಎಸೆತ ) ಆಟದ ನೆರವಿನಿಂದ ತಂಡವು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳ ಸಾದಾರಣ ಮೊತ್ತ ಗಳಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಪರ ಅಮಿತ್ ಮಿಶ್ರಾ 4, ಅವೇಶ್ ಖಾನ್ 2, ರಬಾಡ, ಸ್ಟೋನಿಸ್ ಹಾಗು ಲಲಿತ್ ಯಾದವ್ ತಲಾ 1 ವಿಕೆಟ್ ಪಡೆದರು.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ಸ್ಪಿನ್ನರ್ ಅಮಿತ್ ಮಿಶ್ರಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.