ದುಬೈ : ದುಬೈನ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ನಾಯಕ ಕೆ ಎಲ್ ರಾಹುಲ್ ಅಜೇಯ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ 97 ರನ್ ಗಳ ಗೆಲುವು ದಾಖಲಿಸಿದೆ.
207 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಫಿಂಚ್ (20 ರನ್, 21 ಎಸೆತ), ಎಬಿಡಿ ವಿಲಿಯರ್ಸ್ (28 ರನ್, 18 ಎಸೆತ), ವಾಷಿಂಗ್ಟನ್ ಸುಂದರ್ ( 30 ರನ್, 27 ಎಸೆತ ) ಅವರ ಬ್ಯಾಟಿಂಗ್ ನೆರವಿನಿಂದ 17 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 107 ರನ್ ಗಳಿಸಿ 97 ರನ್ ಅಂತರದಿಂದ ಹೀನಾಯವಾಗಿ ಸೋಲಿಗೆ ಶರಣಾಯತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಸ್ಪಿನ್ನರ್ ಗಳಾದ ಮುರುಗನ್ ಅಶ್ವಿನ್, ರವಿ ಬಿಶ್ನೋಯ್ ತಲಾ 3 ವಿಕೆಟ್, ಶೋಲ್ಡನ್ ಕಾಟ್ರೆಲ್ 2 ಪಡೆದು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಯಕ ಕೆ ಎಲ್ ರಾಹುಲ್ (132 ರನ್, 68 ಎಸೆತ) ಅಜೇಯ ಶತಕ, ಮಾಯಾಂಕ್ ಅಗರ್ವಾಲ್ (26 ರನ್, 20 ಎಸತ) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತು. ಆರ್ ಸಿಬಿ ಪರ ಶಿವಂ ದುಬೆ 2 ವಿಕೆಟ್, ಚಾಹಲ್ 1 ವಿಕೆಟ್ ಪಡೆದರು.
ಅಜೇಯ ಶತಕ ಸಿಡಿಸಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಗೆಲುವಿಗೆ ಕಾರಣರಾದ ನಾಯಕ ಕೆ ಎಲ್ ರಾಹುಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.