ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಸಿ.ಟಿ ರವಿ ಅವರು ಟ್ವೀಟ್ ಮಾಡಿದ್ದೂ, ಬದುಕಿನಲ್ಲಿ ನೋವು, ಬೇಸರ ಸಾಮಾನ್ಯ, ಆದರೆ ನೋವನ್ನು ಹೇಳಿಕೊಳ್ಳುವ ಮತ್ತದಕ್ಕೆ ಪರಿಹಾರ ಕಂಡುಕೊಳ್ಳುವ ದಾರಿಗಳಿದ್ದಾವೆ. ಅದಿಲ್ಲದಿದ್ದಾಗ ನಾಲಗೆ ಹರಿಬಿಡುವುದೊಂದೆ ದಾರಿಯಾಗುತ್ತದೆ. ಅಂತಹ ಪರಿಸ್ಥಿತಿ ತಮಗೆ ನಿರ್ಮಾಣವಾಗಿರುವುದು ವಿಷಾದನೀಯ ಮಾಜಿ ಮುಖ್ಯಮಂತ್ರಿಗಳೆ.
ಹಿಂದೊಂದು ಪಕ್ಷ ತಮ್ಮನ್ನು ಮೂಲೆಗುಂಪು ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡದ್ದನ್ನು ಮರೆಯದಿರಿ. ಈಗ ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗುತ್ತಿರುವ ನೋವನ್ನು ತೋಡಿಕೊಳ್ಳುವ ದಾರಿಯಿಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಕೀಳಾಗಿ ಮಾತನಾಡಿದ್ದು ದುರದೃಷ್ಟಕರ ಮತ್ತು ಅತ್ಯಂತ ಕೀಳು ಮಟ್ಟದ ರಾಜಕೀಯ.
ತಾವು ಯಾರ ಪರ ಎಂಬ ರಾಜಕೀಯ ಮುಖವಾಡ ಹಾಕಿಕೊಂಡಿದ್ದೀರೊ ಅಂತವರ ವಿರುದ್ಧವೇ ನಡೆದುಕೊಂಡು ಅವರ ಭವಿಷ್ಯಕ್ಕೆ ತೆರೆ ಎಳೆದ ಉದಾಹರಣೆಗಳು ಸಾಕಷ್ಟಿವೆ.
“ಯದ್ಭಾವಂ ತದ್ಭವತಿ” ಅನ್ನುವ ಉಕ್ತಿಯಂತೆ ಈಗ ಇಡೀ ಪ್ರಪಂಚವೆ ಆ ರೀತಿ ಇದೆ ಎಂದು ಸಾರಿ ಹೇಳುತ್ತಿರುವುದು ಯಾಕೆ ಮಾಜಿ ಮುಖ್ಯಮಂತ್ರಿಯವರೆ?
ರಾಜ್ಯದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರೆ ನಮ್ಮ ನಾಯಕರು. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ನೀವು ಮೊದಲು ನಿಮ್ಮ ಮನೆಯ ಯಜಮಾನ ಯಾರು ಅನ್ನುವುದನ್ನು ನಿರ್ಧಾರ ಮಾಡಿ. ಮನೆಯೊಂದು ನೂರು ಬಾಗಿಲು ಎಂಬಂತೆ ಇರುವ ನಿಮ್ಮ ಪಕ್ಷವನ್ನು, ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ.
ನಮ್ಮ ಪಕ್ಷ ಬಿಜೆಪಿ ಕರ್ನಾಟಕ ವಿಧಾನ ಪರಿಷತ್ತಿನ 4 ಸ್ಥಾನಗಳನ್ನು ಹಾಗೂ ವಿಧಾನಸಭೆಯ 2 ಕ್ಷೇತ್ರಗಳಲ್ಲಿ ಜಯಶಾಲಿಯಾಗುತ್ತದೆ. ಹಾಗಾಗಿ ಸೋಲನ್ನು ” ಯಾರ ತಲೆಗೆ ಕಟ್ಟುವುದು” ಎಂಬ ವಿಚಾರ ನಿಮ್ಮ ಪಕ್ಷಕ್ಕೆ ಅನ್ವಯವಾಗುವಂತದ್ದು. ನೀವು ಬಿಜೆಪಿಯ ಚಿಂತೆ ಬಿಟ್ಟುಬಿಡಿ.
ಕಳೆದ ಚುನಾವಣೆಯ ಸಮಯದಲ್ಲಿ “ಇದೇ ನನ್ನ ಕೊನೆಯ ಚುನಾವಣೆ” ಎಂದಿದ್ದಿರಿ. ಇತ್ತೀಚೆಗೆ “ಮತ್ತೊಮ್ಮೆ ಮುಖ್ಯಮಂತ್ರಿಯಾದರೆ…” ಎಂಬ ಹೊಸ ಆಸೆಯನ್ನು ವ್ಯಕ್ತಪಡಿಸಿದ್ದೀರಿ. ಇದು ಯಾರನ್ನು “ಕೆಡವುವ ಟಾಸ್ಕ್?” ಎಂದು ನಾವು ಕೇಳಬಹುದಲ್ಲವೇ ಮಾಜಿ ಮುಖ್ಯಮಂತ್ರಿಯವರೆ?
ಕಸ ಗುಡಿಸುವವರ,ಬಂಡೆ ಒಡೆಯುವ ಶ್ರಮಿಕ ವರ್ಗದ ಬಗೆಗಿನ ನಿಮ್ಮ ಹೇಳಿಕೆಗಳು ಅವರ ವೃತ್ತಿ ಧರ್ಮಕ್ಕೆ ಅವಮಾನ ಮಾಡುವಂತದ್ದು. ಪೂಜ್ಯ ಬಸವಣ್ಣನವರ “ಕಾಯಕವೇ ಕೈಲಾಸ” ತತ್ವದ ಬಗ್ಗೆ ನಿಮಗೆ ನಂಬಿಕೆ ಇಲ್ಲ ಎಂಬುದನ್ನು ಶ್ರುತಪಡಿಸುತ್ತದೆ. ಶ್ರಮಿಕ ವರ್ಗ ಗೌರವಯುತವಾಗಿ ಬದುಕುವ ಮನುಷ್ಯರು ಎಂದು ಅರ್ಥ ಮಾಡಿಕೊಳ್ಳಿ ಮಾಜಿ ಮುಖ್ಯಮಂತ್ರಿಯವರೆ.
ಇನ್ನು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ನೀವು ಆಡಿರುವ ಮಾತುಗಳು ಯಾವುದೇ ಪ್ರತಿಕ್ರಿಯೆಗೆ ಯೋಗ್ಯವಾದದ್ದಲ್ಲ. ಇಂತಹ ಮಾತುಗಳ ಬಗ್ಗೆ ದಾಸಶ್ರೇಷ್ಠ ಶ್ರೀ ಪುರಂದರದಾಸರು ಶತಮಾನಗಳ ರಚಿಸಿದ್ದ ಕೀರ್ತನೆ ನಿಮಗೆ ಗೊತ್ತಿರಬೇಕಲ್ಲವೇ? ಎಂದು ಸಿ.ಟಿ.ರವಿ ಹೇಳಿದ್ದಾರೆ.
ಬದುಕಿನಲ್ಲಿ ನೋವು, ಬೇಸರ ಸಾಮಾನ್ಯ, ಆದರೆ ನೋವನ್ನು ಹೇಳಿಕೊಳ್ಳುವ ಮತ್ತದಕ್ಕೆ ಪರಿಹಾರ ಕಂಡುಕೊಳ್ಳುವ ದಾರಿಗಳಿದ್ದಾವೆ. ಅದಿಲ್ಲದಿದ್ದಾಗ ನಾಲಗೆ ಹರಿಬಿಡುವುದೊಂದೆ ದಾರಿಯಾಗುತ್ತದೆ.
ಅಂತಹ ಪರಿಸ್ಥಿತಿ ತಮಗೆ ನಿರ್ಮಾಣವಾಗಿರುವುದು ವಿಷಾದನೀಯ ಮಾಜಿ ಮುಖ್ಯಮಂತ್ರಿಗಳೆ.1/8
— C T Ravi 🇮🇳 ಸಿ ಟಿ ರವಿ (@CTRavi_BJP) October 22, 2020




