ಬೆಂಗಳೂರು: ಮದುವೆ ಸಮಾರಂಭ, ಹುಟ್ಟುಹಬ್ಬ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸರ್ಕಾರ ನಿಗದಿ ಪಡಿಸಿದ ಜನಸಂಖ್ಯೆಯನ್ನೂ ಮೀರಿ ಪಾಸ್ ವಿತರಣೆ ಮಾಡುವ ಮೂಲಕ ಜನರನ್ನು ನಿಯಂತ್ರಿಸದಿದ್ದರೆ ಕಾರ್ಯಕ್ರಮ ಆಯೋಜಿಸುವವರ ಮತ್ತು ಛತ್ರದ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ.
ಈ ಸಂಬಂಧ ಸಚಿವರಾದ ಡಾ.ಕೆ.ಸುಧಾಕರ್, ಬಸವರಾಜ ಬೊಮ್ಮಾಯಿ ಮತ್ತು ಆರ್.ಅಶೋಕ್ ಸಭೆ ನಡೆಸಿ ತೀರ್ಮಾನಿಸಿದ್ದಾರೆ. ಯಾವುದೇ ಕಾರ್ಯಕ್ರಮವಾದರೂ 200 ಮಂದಿ ಮೀರಬಾರದೆಂದು ಸರ್ಕಾರ ಆದೇಶ ಹೊರಡಿಸಿದೆ.
ಕಾರ್ಯಕ್ರಮಗಳಿಗೆ ಛತ್ರ ಬುಕ್ ಮಾಡಲು ಡಿಸಿ ಅನುಮತಿ ಕಡ್ಡಾಯ. ಈಗಾಗಲೇ ಬುಕ್ ಆಗಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಸಂಜೆ ನಂತರ ಬುಕ್ ಮಾಡುವುದಾದರೆ ಅನುಮತಿ ಪಡೆಯಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಎಲ್ಲೇ ಜಾತ್ರೆಗಳು ನಡೆದರೂ ಜಿಲ್ಲಾಧಿಕಾರಿಗಳೇ ಹೊಣೆಗಾರರು ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಸಿದ್ದಾರೆ. ಕೊರೋನಾ ಸೋಂಕಿತರಿಗಾಗಿ 7,500 ಆಕ್ಸಿಜನ್ ಸಿಲಿಂಡರ್ ರವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.