ಸದಸ್ಯ ಸಂಘಟನೆಗಳಿಗೆ ಪದಾಧಿಕಾರಿಗಳ ನೇಮಕ ಅಧಿಕಾರ ಇಲ್ಲ; ಸಮಿತಿ ಸಂಚಾಲಕ ಚಳ್ಳಕೆರೆ ಬಸವರಾಜ್ ಅಭಿಪ್ರಾಯ

ಚಿತ್ರದುರ್ಗ, 01: ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಭೆ ಕರೆಯುವ ಅಧಿಕಾರ ಸಮಿತಿ ಸಂಚಾಲಕರಿಗೆ ಸೇರಿದ್ದು, ಸದಸ್ಯ ಸಂಘಟನೆಗಳಿಗೆ ಇರುವುದಿಲ್ಲ ಎಂದು ಸಮಿತಿ ಸಂಚಾಲಕ ಚಳ್ಳಕೆರೆ ಬಸವರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತ್ರಿಕಾ…

Committee convenor Chalakkere Basavaraj vijayaprabha news

ಚಿತ್ರದುರ್ಗ, 01: ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಭೆ ಕರೆಯುವ ಅಧಿಕಾರ ಸಮಿತಿ ಸಂಚಾಲಕರಿಗೆ ಸೇರಿದ್ದು, ಸದಸ್ಯ ಸಂಘಟನೆಗಳಿಗೆ ಇರುವುದಿಲ್ಲ ಎಂದು ಸಮಿತಿ ಸಂಚಾಲಕ ಚಳ್ಳಕೆರೆ ಬಸವರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಭವನದದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತಸಂಘಟನೆ ಸೇರಿದಂತೆ ನೂರಾರು ಸಂಘಟನೆಗಳು ಸಮಿತಿ ಹೋರಾಟದಲ್ಲಿ ಪಾಲ್ಗೊಂಡಿದ್ದು, ಹಾಗೇಂದು ಸಮಿತಿ ಹೆಸರಲ್ಲಿ ಸಭೆ ಕರೆಯುವ, ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಅಧಿಕಾರ ಸದಸ್ಯ ಸಂಘಟನೆಗಳಿಗೆ ಇಲ್ಲ ಎಂದು ಚಳ್ಳಕೆರೆ ಬಸವರಾಜ್ ಅವರು ಸ್ಪಷ್ಟಪಡಿಸಿದರು.

ಪ್ರವಾಸಿ ಮಂದಿರದಲ್ಲಿ ರೈತಸಂಘ ಆಯೋಜಿಸಿದ ಸಭೆಗೆ ಸಮಿತಿ ಪ್ರಧಾನ ಸಂಚಾಲಕರಾದ ಡಾ.ಬಂಜಗೆರೆ ಜಯಪ್ರಕಾಶ್ ಅವರು ಬಂದಿರಲಿಲ್ಲ. ಉಳಿದಂತೆ ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ಟಿ.ಶಿವಪ್ರಕಾಶ್, ಚಿಕ್ಕಪ್ಪನಹಳ್ಳಿ ಷಣ್ಮುಖ, ಕೆ.ಆರ್ ದಯಾನಂದ್ ಮಾತ್ರ ಸಭೆಯಲ್ಲಿ ಭಾಗವಹಿಸಿದ್ದರು.

Vijayaprabha Mobile App free

ಇನ್ನು ಇಡೀ ಸಮಿತಿ ಹಾದಿಯಲ್ಲಿ ಈವರೆಗೂ ಪದಗ್ರಹಣ ಎಂಬ ಪದ ಬಳಕೆಯಾಗದಿದ್ದರು, ಭಾನುವಾರ ಚಿತ್ರದುರ್ಗದ ಎಪಿಎಂಸಿ ಆವರಣದ ರೈತ ಭವನದಲ್ಲಿ ನಡೆದ ಸಭೆಗೆ ಪ್ರಧಾನ ಸಂಚಾಲಕ ಡಾ.ಬಂಜಗೆರೆ ಜಯಪ್ರಕಾಶ್, ಪಿ.ಕೋದಂಡರಾಮಯ್ಯ ಸಹ ಬಂದಿರಲಿಲ್ಲ. ಆದರೂ, ಮಾಧ್ಯಮಗಳಲ್ಲಿ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿದರು ಎಂದು ಸುದ್ದಿಗಳು ಬಿತ್ತರವಾಗಿದ್ದು, ಈ ಎಲ್ಲ ನಡೆ ಬಗ್ಗೆ ಸಂಚಾಲಕ ಸಮಿತಿಗೆ ಅಸಮಾಧಾನವಿದೆ ಎಂದು ಚಳ್ಳಕೆರೆ ಬಸವರಾಜ್ ತಿಳಿಸಿದರು.

ಇನ್ನು ಚಿಂತಕರಾದ ಜೆ.ಯಾದವರೆಡ್ಡಿ ಮಾತನಾಡಿ, ನಾನು ಕೂಡ ಅಂದಿನ ಸಭೆಗೆ ಹೋಗಿದ್ದೇ, ಈಗ ನನಗೆ ಮನವರಿಕೆ ಆಗಿದ್ದು, ಪ್ರಜಾಪ್ರಭುತ್ವದ ತಳಹದಿಯಲ್ಲಿ ಆಯ್ಕೆ ಪ್ರಕ್ರಿಯೆ ಆಗಬೇಕು ಎಂಬುದು ಸ್ಪಷ್ಟಗೊಂಡಿದ್ದು, ಸಮಿತಿಯಲ್ಲಿ ಒಡಕು ಇಲ್ಲ, ಆದರೆ, ಕೆಲ ಸಣ್ಣಪುಟ್ಟ ತಪ್ಪುಗಳು ಆಗಿವೆ. ಅವುಗಳನ್ನು ಸರಿಪಡಿಸಿಕೊಂಡು ಹೋರಾಟ ರೂಪಿಸುವ ಅಗತ್ಯವಿದೆ ಎಂದು ಯಾದವರೆಡ್ಡಿ ಹೇಳಿದರು ಬಯಲುಸೀಮೆಯ ಕಟ್ಟ ಕಡೆಯ ಜನರಿಗೆ ನೀರು ತಲುಪುವಂತೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದ್ದು, ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲಾಗುವುದು ಎಂದು ಹೇಳಿದರು.

ಸಂಚಾಲಕರಾದ ಜಿ.ಎಸ್.ಉಜ್ಜಿನಪ್ಪ ಅವರು ಮಾತನಾಡಿ, ಹಿಂದಿನಿಂದಲೂ ಸಮಿತಿ ಸಂಚಾಲಕರ ಸಭೆಯಲ್ಲಿ ಚರ್ಚೆ ಬಳಿಕ, ಜನರನ್ನಳಗೊಂಡ ಸಭೆ ಕರೆದು ಅನುಮತಿ ಪಡೆಯುವ ಪದ್ಧತಿ ಹೋರಾಟ ಸಮಿತಿಯಲ್ಲಿದ್ದು, ಅದೇ ರೀತಿ ಮುಂದೆಯೂ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಗೆ ಸಮಿತಿಯ ಯಾದವರೆಡ್ಡಿ, ಚಳ್ಳಕೆರೆ ಬಸವರಾಜ್, ಈ.ಮಹೇಶ್‌ಬಾಬು, ಜಿ.ಎಸ್.ಉಜ್ಜಿನಪ್ಪ, ಆರ್.ಶೇಷಣ್ಣಕುಮಾರ್, ಟಿ.ಷಫಿವುಲ್ಲಾ, ದಸಂಸ ರಾಜ್ಯ ಮುಖಂಡ ಡಿ.ದುರುಗೇಶ್ ಸೇರಿದಂತೆ ಹಲವರು ಸಹಿ ಮಾಡಿ ಬಿಡುಗಡೆ ಮಾಡಿದ ಯಥಾರೂಪ ಇಲ್ಲಿದೆ.

ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೋಂದಾಯಿತ ಸಂಘಟನೆಯಲ್ಲವಾದರೂ, ಈ ಸಮಿತಿ ಕೆಲ ಪದ್ಧತಿಗಳನ್ನು ಚಾಚೂತಪ್ಪದೇ ಪಾಲಿಸಿಕೊಂಡು ಬರುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂಬ ಬಲವಾದ ನಂಬಿಕೆ ಜನರ ಮನದಲ್ಲಿ ಬೇರೂರಿದ್ದ ಸಂದರ್ಭ ಕವಿ ಬಂಜಿಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ಜಿಲ್ಲೆಯ ಪತ್ರಕರ್ತರ ತಂಡ ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಅಧ್ಯಯನ ನಡೆಸಿ ಯೋಜನೆ ಸಾಧ್ಯವಿದೆ ಎಂದು ಮೊದಲು ಮನವರಿಕೆ ಮಾಡಿಕೊಳ್ಳಲಾಯಿತು. ಬಳಿಕ ಮುಕ್ತ ವಿಚಾರ ವೇದಿಕೆ ನೇತೃತ್ವದಲ್ಲಿ ಹಲವು ಸಭೆ, ಚಿಂತನೆಗಳ ಬಳಿಕ ಬಹಿರಂಗವಾಗಿ ಗುರುಭವನದಲ್ಲಿ ಸಾರ್ವನಿಕರು, ಸಂಘ-ಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷಗಳ ಸಭೆ ಕರೆಯಲಾಗಿತ್ತು, ಅಲ್ಲಿ ಹೋರಾಟ ಸಮಿತಿ ರೂಪ ಪಡೆಯಿತು ಸಭೆಯಲ್ಲಿ ರಾಜ್ಯಸಭಾ ಹಿರಿಯ ಸದಸ್ಯ ಹೆಚ್.ಹನುಮಂತಪ್ಪ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು, ಈ ವೇಳೆ ವಿವಿಧ ಆತಿಯು ಸಮಿತಿ ರಚಿಸಲಾಯಿತು.

ಮುಖ್ಯವಾಗಿ ಸಂಚಾಲಕರ ಸಮಿತಿಯೇ ಎಲ್ಲ ರೀತಿಯ ಚರ್ಚೆ ನಡೆಸಿ, ವಿಚಾರವನ್ನು ಜನರ ಮುಂದಿಟ್ಟು ಅನುಮತಿ ಅಥವಾ ಜನರು ತಿರಸ್ಕರಿಸಿದರೆ ಆ ವಿಷಯವನ್ನು ಕೈಬಿಡುವ ಪದ್ಧತಿ ಈ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದು, ಹೆಚ್.ಹನುಮಂತಪ್ಪ ಅವರ ಬಳಿಕ ಪಿ.ಕೋದಂಡರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಬಸವ ಮಂಟಪದಲ್ಲಿ ಜರುಗಿದ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಜನರ ಸಭೆಯಲ್ಲಿ ಆಯ್ಕೆ ಮಾಡಿಕೊಳ್ಳಲಾಯಿತು.

ಈ ಅವಧಿಯಲ್ಲಿ ಸರ್ಕಾರದ ಮಟ್ಟದಲ್ಲಿ ಸಭೆ, ಬೃಹತ್ ಹೋರಾಟಗಳು, ರಸ್ತೆ ತಡೆ, ಸಮಾವೇಶ, ಹೋರಾಟದ ಫಲ ಸರ್ಕಾರ ಯೋಜನೆ ಜಾರಿಗೆ ಅನುಮತಿ ನೀಡಿತ್ತಾದರೂ, ಬಳಿಕ ಎಲ್ಲ ಸರ್ಕಾರಗಳು ಒಂದಲ್ಲ ಒಂದು ರೀತಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಇಚ್ಛಾಶಕ್ತಿ ತೋರಿದ್ದು, ನಿಧಾನಗತಿಯಲ್ಲಿ ಆಗುತ್ತಿದೆ ಎಂಬ ಅಸಮಾಧಾನ ಹೋರಾಟ ಸಮಿತಿ ಹಾಗು ಜಿಲ್ಲೆಯ ಜನರ ಮನದಲ್ಲಿದೆ.

ಜಿಲ್ಲೆಯ ಕೆರೆಗಳ ಹೂಳೂ ತೆಗೆಸುವ, ಅಚ್ಚುಕಟ್ಟು ಮಾಡುವ ಹಾಗೂ ಮೊದಲ ಹಂತದ ಕಾಮಗಾರಿ ಆರಂಭಕ್ಕೆ ಒತ್ತಡ, ಪರಿಸರ ಇಲಾಖೆ ಅನುಮತಿ ಸೇರಿ ವಿವಿಧ ವಿಷಯಗಳ ಕುರಿತು ಸಮಿತಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ತೀವ್ರ ಚರ್ಚೆ ನಡೆಸಿ, ಹೋರಾಟ ರೂಪಿಸುವ ಹಾದಿಯಲ್ಲಿದ್ದು, ದುರಾದುಷ್ಟವಾಶತ್ ನಮ್ಮ ಸಮಿತಿ ಅಧ್ಯಕ್ಷರಾದ ಎಂ.ಜಯಣ್ಣ, ಕಾರ್ಯಾಧ್ಯಕ್ಷರಾದ ಮುರುಘ ರಾಜೇಂದ್ರ ಒಡೆಯರ್ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ನಮ್ಮನ್ನು ಅಗಲಿದ್ದು ಹೋರಾಟಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದ್ದು, ಈ ಹಿನ್ನೆಲೆಯಲ್ಲಿ ಹೋರಾಟದ ರೂಪರೇಷೆ ಸಿದ್ಧಪಡಿಸುವ ಚರ್ಚೆ ನನೆಗುದಿಗೆ ಬಿದ್ದಿತು.

ಈಗ ಚಾಲನೆ ನೀಡುವ ಸಂಬಂಧ ಚರ್ಚೆ ನಡೆಯುತ್ತಿರುವಾಗಲೇ ನೀರಾವರಿ ಹೋರಾಟ ಸಮಿತಿಯ ಸದಸ್ಯ ಸಂಘಟನೆಗಳು ನಾವು ಎಂದು ಹೇಳಿಕೊಂಡು ಕೆಲವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದು, ಈ ಕಾರಣಕ್ಕೆ ಮಾಧ್ಯಮಗಳ ಮುಂದೆ ಬರಬೇಕಾಗಿದ್ದು, ನೀರಾವರಿ ಹೋರಾಟ ಸಮಿತಿ ಯಾವುದೇ ತೀರ್ಮಾನಗಳನ್ನು ಏಕಾಏಕಿ ತೆಗೆದುಕೊಳ್ಳುವುದಿಲ್ಲ. ಮೊದಲಿಗೆ ಸಂಚಾಲಕರ ಸಮಿತಿ ಸಭೆಯಲ್ಲಿ ಈ ಕುರಿತು ವಿಷಯದ ಗಂಭೀರತೆ ಆಧರಿಸಿ ಸಭೆಗಳನ್ನು ನಡೆಸಿ, ಅಲ್ಲಿ ಅಂತಿಮ ತೀರ್ಮಾನಕ್ಕೆ ಬಂದ ಬಳಿಕ ಪತ್ರಿಕೆಗಳ ಮೂಲಕ ಜಿಲ್ಲೆಯ ಜನರನ್ನೊಳಗೊಂಡ ಸಭೆ ಕರೆಸಿ, ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಲಾಗುತ್ತದೆ. ಇನ್ನು ಸಭೆಯಲ್ಲಿ ಪಾಲ್ಗೊಂಡ ಜನರ ಅಭಿಪ್ರಾಯದಂತೆ ಪದಾಧಿಕಾರಿಗಳ ಆಯ್ಕೆ, ಹೋರಾಟದ ರೂಪುರೇಷೆ ಸಿದ್ಧಗೊಂಡ ಬಳಿಕ ಅದನ್ನು ಅನುಷ್ಟಾನಕ್ಕೆ ತರಲಾಗುತ್ತದೆ. ಆದರೆ, ರೈತಸಂಘದ ಒಂದು ಬಣ ಸೇರಿದಂತೆ ಯಾವುದೇ ಸಂಘಟನೆಗಳಿಗೆ ನೀರಾವರಿ ಹೋರಾಟ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮತ್ತು ಸಭೆ ಸಮಿತಿ ಹೆಸರಲ್ಲಿ ಸಭೆ ಕರೆಯುವ ಅಧಿಕಾರ ಹೊಂದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸಲಾಗುತ್ತದೆ.

ಅಹಿಂದ-ನಾಯಕ, ಸಮಿತಿ ಕಾರ್ಯಾಧ್ಯಕ್ಷ ಮುರುಘ ರಾಜೇಂದ್ರ ಒಡೆಯ, ದಲಿತ ನಾಯಕ, ಸಮಿತಿ ಅಧ್ಯಕ್ಷ ಎಂ.ಜಯಣ್ಣ ಅವರಿಗೆ ಸಮಿತಿಯಿಂದ ಶ್ರದ್ಧಾಂಜಲಿ ಸಭೆ ಆಯೋಜಿಸಿ ಗೌರವವನ್ನು ಸೂಚಿಸಿಲ್ಲ. ಈಗಲೇ ಕೆಲವರು ನೀರಾವರಿ ಹೋರಾಟ ಸಮಿತಿಯ ಸದಸ್ಯ ಸಂಘಟನೆಗಳ ಹೆಸರಲ್ಲಿ ಸಭೆ ಕರೆದು ಆಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಹೇಳಿಕೆ ನೀಡಿ ಗೊಂದಲ ಹುಟ್ಟುಹಾಕಲಾಗುತ್ತಿದ್ದು, ಇದು ಅವರಿಗೆ ಸರಿಯಾದ ಮಾಹಿತಿ ಕೊರತೆ ಇಲ್ಲದ ಕಾರಣಕ್ಕೆ ಮಾಡಿದ್ದಾರೆ ಎಂದು ಭಾವಿಸಿದ್ದೇವೆ.

ಪದಾಧಿಕಾರಿಗಳ ನೇಮಕ ಪ್ರಕ್ರಿಯೆ, ಸಮಿತಿ ಕಾರ್ಯಚಟುವಟಿಕೆ ಈ ಮೊದಲಿನಂತೆಯೇ ಸಂಚಾಲಕರ ಸಮಿತಿ ಸಭೆಯಲ್ಲಿ ಚರ್ಚೆ ಬಳಿಕ, ಪತ್ರಿಕಾ ಹೇಳಿಕೆ ನೀಡಿ ಜಿಲ್ಲೆಯ ಮಠಾಧೀಶರು, ಎಲ್ಲ ರಾಜಕೀಯ ಪಕ್ಷಗಳು ಹಾಗೂ ರೈತ, ಕಾರ್ಮಿಕ ಸೇರಿದಂತೆ ಎಲ್ಲ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿ ಆಸಕ್ತ ಎಲ್ಲರನ್ನೊಳಗೊಂಡು ಸಭೆ ಕರೆಯವುದಲ್ಲದೆ, ಆ ಸಭೆಯಲ್ಲಿ ಜನರು ಅಭಿಪ್ರಾಯವೇ ಅಂತಿಮವಾಗಿರುತ್ತದೆ. ಇಲ್ಲಿ ಸಂಚಾಲಕರ ಸಮಿತಿಯು ಸಭೆ ಆಯೋಜಿಸುವುದು, ಹೋರಾಟಕ್ಕೆ ಒಂದು ರೂಪ ಕೊಡುವ ಕೆಲಸವನ್ನೇ ಮಾತ್ರ ಮಾಡುತ್ತದೆ.

ನೀರಾವರಿ ಹೋರಾಟಕ್ಕೆ ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಸಾಣೇಹಳ್ಳಿ ಸ್ವಾಮೀಜಿ, ಸೇವಾಲಾಲ್ ಸ್ವಾಮೀಜಿ, ಭೋವಿ ಮಠದ ಗುರುಗಳು, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಹೀಗೆ ಬಹಳಷ್ಟು ಮಠಾಧೀಶರು ಬೆಂಬಲವಾಗಿ ನಿಂತಿದ್ದು, ಸಮಿತಿ ಆಯೋಜಿಸುವ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ಜೋಳಿಗೆ ಹಿಡಿದು ವಿಧಾನಸೌಧಕ್ಕೆ ನೀರಿನ ಭೀಕ್ಷೆ ಬೇಡಲು ಸಮಿತಿ ಜೊತೆಗೆ ಹೆಜ್ಜೆ ಹಾಕಿದ್ದು, ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿ, ಜತೆಗೆ ಆರ್ಥಿಕ ಸಹಾಯ ಮಾಡಿದ್ದಾರೆ.

ಹಾಲಿ, ಮಾಜಿ ಶಾಸಕರು, ಸಂಸದರು, ಕಾರ್ಮಿಕ, ದಲಿತ, ಜಿಪಂ, ತಾಪಂ, ಗ್ರಾಪಂ ಸದಸ್ಯರು, ಕನ್ನಡ, ರೈತ, ವಿದ್ಯಾರ್ಥಿ ಸೇರಿದಂತೆ ನೂರಾರು ಸಂಘಟನೆಗಳು, ಎಲ್ಲ ಸಮುದಾಯದ ಸಮಿತಿ ಜನ ಹೋರಾಟದಲ್ಲಿ ಪಾಲ್ಗೊಂಡಿದ್ದು, ಹಣದ ಸಹಕಾರ ನೀಡಿದ್ದಾರೆ. ಈ ಸಭೆಯಲ್ಲಿ ನೂತನ ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಈ ಸಂಬಂಧ ಶೀಘ್ರದಲ್ಲಿಯೇ ಸಂಚಾಲಕರ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡು ಬಹಿರಂಗ ಸಭೆ ಕರೆಯಲಾಗುವುದು, ಅದೆಲ್ಲದಕ್ಕಿಂತಲೂ ಮುಖ್ಯವಾಗಿ ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಅವರ ಹೋರಾಟದ ಹಾದಿ ಸ್ಮರಿಸಲು ಶ್ರದ್ಧಾಂಜಲಿ ಸಭೆ ಆಯೋಜಿಸುವುದು ತುರ್ತು ಕಾರ್ಯವಾಗಿದ್ದು, ಈ ಸಂಬಂಧ ಸಮಿತಿ ಶೀಘ್ರದಲ್ಲಿ ದಿನಾಂಕ ಪ್ರಕಟಿಸಲಿದೆ.

ಸಮಿತಿಯ ಸದಸ್ಯ ಸಂಘಟನೆಗಳು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಕರೆಯುವ ಜಿಲ್ಲೆಯ ಜನರನ್ನೊಳಗೊಂಡ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸುವ ಅಧಿಕಾರ, ಹಕ್ಕು ಹೊಂದಿದ್ದು, ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡುವ, ಸಮಿತಿ ಹೆಸರಲ್ಲಿ ಸಭೆ ಕರೆಯುವ ಅಧಿಕಾರ ನೀರಾವರಿ ಹೋರಾಟ ಸಮಿತಿಗೆ ಮಾತ್ರ ಇರುತ್ತದಲ್ಲದೆ, ಸದಸ್ಯ ಸಂಘಟನೆಗಳಿಗೆ ಇರುವುದಿಲ್ಲ. ಅದ ಕಾರಣ ಜಿಲ್ಲೆಯ ಜನರಲ್ಲಿ ಗೊಂದಲ ಹುಟ್ಟುಹಾಕುವ ಕಾರ್ಯ ಜವಾಬ್ದಾರಿಯುತ ಸಂಘಟನೆಗಳು ಮಾಡಬಾರದು ಎಂದು ಮನವಿ ಮಾಡಿಕೊಳ್ಳುತ್ತಿದ್ದು, ನೀರಾವರಿ ಹೋರಾಟ ಸಮಿತಿ ಆಯೋಜಿಸುವ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅಧಿಕಾರಸ್ಥರು ಸದಸ್ಯ ಸಂಘಟನೆ ಮುಖಂಡರು, ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಇರುತ್ತದೆ ಎಂಬುದನ್ನು ಈ ಮೂಲಕ ಹೇಳುತ್ತೇವೆ.

ಪತ್ರಿಕಾ ಭವನದಲ್ಲಿ ಸೋಮವಾರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ದಿವಂಗತ ಎಂ.ಜಯಣ್ಣ, ಕಾರ್ಯಾಧ್ಯಕ್ಷ ಮುರುಘ ರಾಜೇಂದ್ರ ಒಡೆಯರ್ ಅವರ ಭಾವಚಿತ್ರಕ್ಕೆ ಸಮಿತಿ ಸಂಚಾಲಕರು ಪುಷ್ಪನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿ.ಎಸ್.ಉಜ್ಜಿನಪ್ಪ, ಆರ್.ಶೇಷಣ್ಣಕುಮಾರ್, ಎಂ.ಜೆ.ಪ್ರಸನ್ನ,ಜೆ.ಯಾದವರೆಡ್ಡಿ, ಪಾರ್ಥ ರಾಜೇಂದ್ರ ಒಡೆಯರ್, ಚಳ್ಳಕೆರೆ ಬಸವರಾಜ್, ಟಿ.ಷಫೀವುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.