ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಮನೆಗೆ ಭೇಟಿ ನೀಡಬೇಕಿದ್ದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮ ರದ್ದಾಗಿದ್ದು, ಸಮಯದ ಅಭಾವ ಹಿನ್ನೆಲೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದು ಶೆಟ್ಟರ್ ಗೆ ಖುದ್ದು ಸಿಎಂ ಕರೆ ಮಾಡಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಅವರ ನಿವಾಸದ ಬಳಿಗೆ ಬಂದಿದ್ದ ಹಲವಾರು ಬಿಜೆಪಿ ಮುಖಂಡರು ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದ್ದಾರೆ. ಸಿಎಂ ಭೇಟಿ ಹಿನ್ನೆಲೆ ಶೆಟ್ಟರ್ ನಿವಾಸಕ್ಕೆ ಭಾರೀ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ಶೆಟ್ಟರ್ ಮೇಲೆ ಅಪಾರ ಪ್ರೀತಿ, ವಿಶ್ವಾಸವಿದೆ: ಬೊಮ್ಮಾಯಿ
ಇನ್ನು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಮನೆಗೆ ಭೇಟಿ ನೀಡಬೇಕಿದ್ದ ಕಾರ್ಯಕ್ರಮ ರದ್ದಾದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ.
ಹೌದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಂಜೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ನಮ್ಮ ಸಿಬ್ಬಂದಿ ರಾತ್ರಿ 9 ಗಂಟೆಗೆ ವಿಮಾನ ಹೊರಡಬೇಕಿತ್ತು ಎಂದು ಮಾಹಿತಿ ನೀಡಿದ್ದು, ಸಮಯದ ಅಭಾವ ಇದ್ದ ಕಾರಣ ಶೆಟ್ಟರ್ ಅವರ ಮನೆಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದು, ಶೆಟ್ಟರ್ ಮೇಲೆ ಅಪಾರ ವಿಶ್ವಾಸ, ಅಭಿಮಾನವಿದ್ದು, ಅವರು ಬೆಂಗಳೂರಿಗೆ ಬಂದಾಗ ಭೇಟಿಯಾಗುವೆ ಎಂದಿದ್ದಾರೆ.