ಸಿದ್ಧರಾಮಯ್ಯ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು 30 ಕೋಟಿ ರೂ. ಒದಗಿಸಲಾಗುವುದು. ಸುಸ್ಥಿರ ಸಾವಯವ ಕೃಷಿಯನ್ನು ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕನ್ನು ರಾಜ್ಯದ ಪ್ರಥಮ ಸಾವಯವ…

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು 30 ಕೋಟಿ ರೂ. ಒದಗಿಸಲಾಗುವುದು.

ಸುಸ್ಥಿರ ಸಾವಯವ ಕೃಷಿಯನ್ನು ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಿ, ರೈತರ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಾವಯವ ಪ್ರಮಾಣೀಕರಣ ವ್ಯವಸ್ಥೆ ಕಲ್ಪಿಸಲಾಗುವುದು.

ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಸೋಲಿಗ, ಹಲಸರು, ಜೇನು ಕುರುಬ, ಗೌಡಲು, ಸಿದ್ಧಿ, ಕುಡಿಯ, ಮಲೆಕುಡಿಯ, ಕಾಡುಕುರುಬ, ಇರುಳಿಗ, ಕೊರಗ, ಬೆಟ್ಟಕುರುಬ, ಯರವ, ಪಣಿಯನ್ ಇತ್ಯಾದಿ ಪರಿಶಿಷ್ಟ ಪಂಗಡದ ಬುಡಕಟ್ಟುಗಳ ಜನಾಂಗದವರಿಗೆ ಮೂಲಸೌಕರ್ಯಗಳನ್ನು ಒದಗಿಸಲು 200 ಕೋಟಿ ರೂ. ಅನುದಾನ ನೀಡಲಾಗುವುದು.

Vijayaprabha Mobile App free

ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ 13 ಬುಡಕಟ್ಟು ಜನಾಂಗಗಳಾದ ಜೇನು ಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಲಸರು, ಗೌಡಲು, ಸಿದ್ಧಿ, ಬೆಟ್ಟಕುರುಬ, ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಈ ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿಯನ್ನು ಕೈಗೊಳ್ಳಲಾಗುವುದು.

ಬಯಲುಸೀಮೆ, ಮಲೆನಾಡು ಹಾಗೂ ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ ಒಟ್ಟಾರೆಯಾಗಿ 83 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.

ಕಾರವಾರ ನೌಕಾನೆಲೆಯ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಅಗತ್ಯ ಅನುದಾನ ಒದಗಿಸಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.

ಕರ್ನಾಟಕ ರಾಜ್ಯದಲ್ಲಿ ಜಲಸಾರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಅಪಾರ ಸಾಧ್ಯತೆಗಳಿವೆ. ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ಈಗಾಗಲೇ ಕರ್ನಾಟಕ ಜಲಸಾರಿಗೆ ನೀತಿಗೆ ಮಂಜೂರಾತಿ ನೀಡಲಾಗಿದೆ. ಕರಾವಳಿಯಲ್ಲಿ ವ್ಯವಸ್ಥಿತ ಮೂಲಸೌಲಭ್ಯ ಒದಗಿಸಲು ಹಾಗೂ ನೌಕಾ ಚಟುವಟಿಕೆಗಳ ನಿರ್ವಹಣೆಯಲ್ಲಿ ದಕ್ಷತೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ.

ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೋ, ಕೋಸ್ಟಲ್ ಬರ್ತ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಕಿ ಬಂದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕ್ಷೇತ್ರ ಹಾಗೂ ನದಿ ಕ್ರೂಸ್ ಪ್ರವಾಸೋದ್ಯಮ ಯೋಜನೆಗಳಿಗೆ ವಿಸ್ತೃತ ಯೋಜನೆ ಸಿದ್ದಪಡಿಸಲಾಗುವುದು.

ಪ್ರತಿ ವರ್ಷವೂ ಮುಂಗಾರು ಮಳೆಯ ಸಮಯದಲ್ಲಿ ಕರಾವಳಿ ತೀರದಲ್ಲಿ ಕಡಲು ಕೊರೆತದ ಘಟನೆಗಳು ಸಂಭವಿಸುವುದನ್ನು ತಡೆಗಟ್ಟಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು.
i. ಕಡಲು ಕೊರೆತದ ಪರಿಣಾಮಗಳನ್ನು ಸಮಗ್ರವಾಗಿ ಎದುರಿಸಲು ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ (Shoreline Management Plan) ಅನ್ನು ಚೆನ್ನೈ ಐ.ಐ.ಟಿ ವತಿಯಿಂದ ತಯಾರಿಸಲಾಗಿದೆ.

ii. ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ (Shoreline Management Plan) ಅನ್ನು ಜಾರಿಗೊಳಿಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ವಿಸ್ತೃತ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗುವುದು.

iii. ವರದಿಯಲ್ಲಿನ ಕಡಲು ಕೊರೆತದ ತಡೆಗಟ್ಟುವ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು.

iv. ರಾಷ್ಟ್ರೀಯ ವಿಪತ್ತು ಉಪಶಮನ ನಿಧಿಯಡಿ 200 ಕೋಟಿ ರೂ. ಖರ್ಚು ಮಾಡಲಾಗುವುದು.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆಬದಿ ಸೌಲಭ್ಯಗಳನ್ನು
(Highway Hubs) ಉನ್ನತೀಕರಿಸುವ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು.

ರಾಜ್ಯ ವಿಪತ್ತು ಉಪಶಮನ ನಿಧಿ ಹಾಗೂ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ ಅನುದಾನದಡಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು:
i) ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಭೂ ಕುಸಿತ ತಡೆಯುವುದು.

ii) ಕರಾವಳಿ ಜಿಲ್ಲೆಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ಕೊರೆತ ತಗ್ಗಿಸುವುದು.

ರಾಜ್ಯದಲ್ಲಿ ಪ್ರಗತಿಯಲ್ಲಿರುವ 42 ಸ್ವಯಂಚಾಲಿತ ಪರೀಕ್ಷಾ ಪಥಗಳ ನಿರ್ಮಾಣವನ್ನು ಸದರಿ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.

    2025-26ನೇ ಸಾಲಿನಲ್ಲಿ ಹೊನ್ನಾವರ, ಚಾಮರಾಜನಗರ ಮತ್ತು ಚಿತ್ರದುರ್ಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥಗಳನ್ನು ನಿರ್ಮಿಸಲು ಕ್ರಮವಹಿಸಲಾಗುವುದು. ಈ ಉದ್ದೇಶಕ್ಕಾಗಿ 12 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.

    WhatsApp Group Join Now
    Telegram Group Join Now
    ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.