ತಮಿಳುನಾಡು: ತನ್ನ ಪರೀಕ್ಷಾ ಕೇಂದ್ರವನ್ನು ತಲುಪಲು ಬಸ್ಗಾಗಿ ಕಾಯುತ್ತಿದ್ದ 12ನೇ ತರಗತಿಯ ಬಾಲಕಿಯೊಬ್ಬಳು, ತಾನು ಮತ್ತು ಇನ್ನೊಬ್ಬ ಮಹಿಳೆ ಕೈಮಾಡಿದರೂ ನಿಗದಿತ ಬಸ್ ನಿಲ್ದಾಣದಲ್ಲಿ ನಿಲ್ಲದೇ ತೆರಳಿದ ಕಾರಣ ಸರ್ಕಾರಿ ಬಸ್ಸಿನ ಹಿಂದೆ ಓಡಬೇಕಾಯಿತು.
ಮಂಗಳವಾರ ಬೆಳಿಗ್ಗೆ 8ರ ಸುಮಾರಿಗೆ ನಡೆದ ಈ ಘಟನೆಯನ್ನು ಬಸ್ಸಿನ ಹಿಂದೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ಹುಡುಗಿಯು ಸ್ವಲ್ಪ ದೂರ ಬಸ್ಸಿನ ಹಿಂದೆ ಓಡಿದ ಬಳಿಕ ಬಸ್ಸನ್ನು ನಿಲುಗಡೆ ಮಾಡಿದ್ದು ವೀಡಿಯೋದಲ್ಲಿ ಸೆರೆಯಾಗಿದೆ.
ಘಟನೆಯ ವಿಡಿಯೋ ವೈರಲ್ ಆದ ಬಳಿಕ, ಸಾರಿಗೆ ಇಲಾಖೆಯು ಖಾಯಂ ಉದ್ಯೋಗಿಯಾಗಿದ್ದ ಬಸ್ ಚಾಲಕ ಎಸ್.ಮುನಿರಾಜ್ ಅವರನ್ನು ಅಮಾನತುಗೊಳಿಸಿದ್ದು, ಗುತ್ತಿದೆ ಆಧಾರದ ಮೇಲೆ ನೇಮಕಗೊಂಡ ಕಂಡಕ್ಟರ್ ಅಶೋಕ್ ಕುಮಾರ್ ಎಂಬುವವರನ್ನು ಕೆಲಸದಿಂದ ತೆಗೆದುಹಾಕಿದೆ.
ಮೂಲಗಳ ಪ್ರಕಾರ, ಬಾಲಕಿ ಕೊಠಕೋಟ್ಟೈ ನಿಲ್ದಾಣದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ತನ್ನ ಪರೀಕ್ಷಾ ಕೇಂದ್ರವಾದ ನಿಮ್ಮಿಯಾಂಬಟ್ಟು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದಾಳೆ.
ಘಟನೆ ನಡೆದ 30 ನಿಮಿಷಗಳಲ್ಲಿ ಚಾಲಕ ಮುನಿರಾಜ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಾರಿಗೆ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. “ನಿಯಮಗಳ ಪ್ರಕಾರ, ಯಾವುದೇ ಪ್ರಯಾಣಿಕರು ಸ್ಪಷ್ಟವಾಗಿ ಕಾಯದಿದ್ದರೂ ಸಹ, ಚಾಲಕನು ಪ್ರತಿ ಗೊತ್ತುಪಡಿಸಿದ ಬಸ್ ನಿಲ್ದಾಣದಲ್ಲಿ ನಿಲ್ಲಬೇಕು. ದೂರದಿಂದ ಬರುವ ವ್ಯಕ್ತಿಗಳು ಇರಬಹುದು, ಮತ್ತು ನಿರ್ವಾಹಕನು ಚಾಲಕನಿಗೆ ನಿಲ್ಲಿಸುವಂತೆ ಸೂಚಿಸಬೇಕು. ಈ ಸಂದರ್ಭದಲ್ಲಿ, ಇಬ್ಬರೂ ತಮ್ಮ ಕರ್ತವ್ಯದಲ್ಲಿ ವಿಫಲರಾದರು” ಎಂದು ಅಧಿಕಾರಿ ಹೇಳಿದರು.
ವಾಣಿಯಂಬಾಡಿಯಿಂದ ಅಲಂಗಯಂ ಮೂಲಕ ತಿರುಪತ್ತೂರುಗೆ ಪ್ರಯಾಣಿಸುತ್ತಿದ್ದ ಬಸ್ ತನ್ನ ಅಂತಿಮ ಗಮ್ಯಸ್ಥಾನವನ್ನು ತಲುಪುವ ಮೊದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಲ್ಲದೇ “ಬಾಲಕಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿದ್ದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ” ಎಂದು ಅವರು ಹೇಳಿದರು.