ಅಬುದಾಬಿ : ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್, ಯುನಿವರ್ಸ್ ಬಾಸ್’ ಎಂದೇ ಖ್ಯಾತರಾಗಿರುವ ಕ್ರಿಸ್ ಗೇಲ್ ಅವರು ಟಿ20 ಕ್ರಿಕೆಟ್‌ನಲ್ಲಿ ಸಾವಿರ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗೇಲ್ 41ನೇ ವಯಸ್ಸಿನಲ್ಲೂ ವಿಜೃಂಭಿಸುತ್ತಿದ್ದು, ಐಪಿಎಲ್‌ನಲ್ಲಿ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ 7 ಸಿಕ್ಸರ್ ಸಿಡಿಸುವ ಮೂಲಕ ಈ ಸಾಧನೆ ಮಾಡಿದರು. ಗೇಲ್ ಈ ಪಂದ್ಯದಲ್ಲಿ 8 ಸಿಕ್ಸರ್ ಸಮೇತ 99 ಗಳಿಸಿ ಶತಕ ವಂಚಿತರಾದರು.
ಕ್ರಿಸ್ ಗೇಲ್ ಅವರು ತಮ್ಮ 410ನೇ ಟಿ20 ಪಂದ್ಯದಲ್ಲಿ ಈ ಸಾಧನೆಯನ್ನು ಮಾಡಿದ್ದು, ಒಟ್ಟು ಟಿ20 ಪಂದ್ಯದಲ್ಲಿ 22 ಶತಕ ಮತ್ತು 85 ಅರ್ಧಶತಕಗಳ ಸಹಿತ 13 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇಷ್ಟೇ ಅಲ್ಲದೆ ಕ್ರಿಸ್ ಗೇಲ್ ಅವರು ಏಕದಿನ ಪಂದ್ಯಗಳಲ್ಲಿ 331 ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ 98 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.
ಟಿ20 ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದವರ ಪೈಕಿ ಗೇಲ್ (1001) ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಕಿರಣ್ ಪೊಲಾರ್ಡ್ (690), ಬ್ರೆಂಡಾಮ್ ಮಕ್ಯುಲಂ (485), ಶೇನ್ ವಾಟ್ಸನ್ (467), ಆಂಡ್ರೆ ರಸೆಲ್ (447), ಮತ್ತು ಡಿವಿಲಿಯರ್ಸ್ (417) ಇದ್ದಾರೆ.