ಚಿಕ್ಕಮಗಳೂರು: ತಾಲ್ಲೂಕಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಮಲ್ಲೇನಹಳ್ಳಿ ದೇವೀರಮ್ಮ ಜಾತ್ರೆ ವಿಜ್ರಂಭಣೆಯಿಂದ ನಡೆಯುತ್ತಿದೆ. ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿರುವ ದೇವಸ್ಥಾನಕ್ಕೆ, ಸುಮಾರು 3 ಕಿಮೀ ಕಡಿದಾದ ದುರ್ಗಮ ಹಾದಿಯ ಬೆಟ್ಟವನ್ನು ಏರಿಯೇ ಹೋಗಬೇಕು. ಹೀಗೆ ಬೆಟ್ಟ ಹತ್ತುವ ಭಕ್ತರು ನಾನಾ ತೊಂದರೆಗಳನ್ನು ಎದುರಿಸುವಂತಾಗಿದೆ.
ಚಿಕ್ಕಮಗಳೂರು ಭಾಗದಲ್ಲಿ ಮಳೆ ಸುರಿಯುತ್ತಿದ್ದು ಮಳೆಯ ನಡುವೆಯೇ ಭಕ್ತರು ದೇವೀರಮ್ಮನ ದರ್ಶನಕ್ಕಾಗಿ ಬೆಟ್ಟ ಏರುತ್ತಿದ್ದಾರೆ. ಈ ವೇಳೆ ಬೆಟ್ಟ ಹತ್ತುತ್ತಿದ್ದ ಯುವತಿಯೋರ್ವಳು ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾಳೆ. ಬೆಂಗಳೂರು ಮೂಲದ ಸಿಂಧು(25) ಬೆಟ್ಟ ಹತ್ತುವಾಗಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಮತ್ತೊಬ್ಬ ಭಕ್ತೆ ಬೆಂಗಳೂರು ಮೂಲದ ದಿವ್ಯಾ(30) ಎಂಬ ಯುವತಿಗೆ ಕಾಲು ಮುರಿದಿದ್ದು ವಾಪಸ್ ಕರೆತರಲಾಗುತ್ತಿದೆ.
ಮಂಗಳೂರು ಮೂಲದ ಜಯಮ್ಮ(55) ಎಂಬುವವರು ಗುಡ್ಡ ಹತ್ತುವಾಗಲೇ ಲೋಬಿಪಿ ಉಂಟಾಗಿ ಗುಡ್ಡದಲ್ಲೇ ಸುಸ್ತಾಗಿ ಕುಳಿತುಕೊಳ್ಳುವಂತಾಯಿತು. ಮತ್ತೋರ್ವ ಭಕ್ತ ತರೀಕೆರೆ ಮೂಲದ ಯುವಕ ವೇಣು ಎಂಬಾತ ಜಾರಿಬಿದ್ದು ತಲೆಗೆ ಗಾಯವಾಗಿದೆ. ಎಲ್ಲರನ್ನೂ ಸ್ಟ್ರೆಚ್ಚರ್ ಮೂಲಕ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಗುಡ್ಡದಿಂದ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆಯಿಂದಲೂ ಮಳೆಗೆ ಗುಡ್ಡ ಜಾರುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರಿಗಾಲಿನಲ್ಲಿ ರಾತ್ರಿಯಿಂದಲೂ ಗುಡ್ಡ ಏರುತ್ತಿದ್ದಾರೆ. ಗುಡ್ಡದಲ್ಲಿ ಜಾರಿಕೆ ಇರುವ ಹಿನ್ನಲೆ ಹಗ್ಗ ಹಿಡಿದು ಭಕ್ತರು ಗುಡ್ಡ ಏರುತ್ತಿದ್ದು ಸ್ಥಳದಲ್ಲಿ ರೆಸ್ಕ್ಯೂ ಟೀಂ ಸದಸ್ಯರು ಹಾಜರಿದ್ದು ಭಕ್ತರಿಗೆ ಸಮಸ್ಯೆಯಾಗದಂತೆ ನೆರವು ಒದಗಿಸಿದ್ದಾರೆ.