ದುಬೈ : ಐಪಿಎಲ್ -2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 10 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.
179 ರನ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 17.4 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 181 ರನ್ ಗಳಿಸಿ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಚೆನ್ನೈ ಪರ, ಶೇನ್ ವ್ಯಾಟ್ಸನ್-83*, ಫಾಫ್ ಡುಪ್ಲೆಸಿಸ್ -87*, ಅವರ ಅಜೇಯ ಆಟದಿಂದ 10 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಪಂಜಾಬ್ ಪರ ಯಾವೊಬ್ಬ ಬೌಲರ್ ಕೂಡ ವಿಕೆಟ್ ಪಡೆಯುವಲ್ಲಿ ಯಶ ಕಾಣಲಿಲ್ಲ.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಯಕ ಕನ್ನಡಿಗ ಕೆ.ಎಲ್. ರಾಹುಲ್-63, ಮಾಯಾಂಕ್ ಅಗರ್ವಾವಾಲ್-26, ಮಂದೀಪ್ ಸಿಂಗ್-27, ಹಾಗೂ ನಿಕೊಲಸ್ ಪೂರನ್-33 ಅವರ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಚೆನ್ನೈ ಪರ, ಶಾರ್ದುಲ್ ಠಾಕೂರ್ 2, ರವೀಂದ್ರ ಜಡೇಜಾ, ಚಾವ್ಲಾ ತಲಾ ಒಂದು ವಿಕೆಟ್ ಪಡೆದರು.
ಚೆನ್ನೈ ತಂಡದ ಪರ ಅಜೇಯ 83 ರನ್ ಗಳ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ಶೇನ್ ವ್ಯಾಟ್ಸನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.