ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ವಿಜಯನಗರ ಜಿಲ್ಲೆ ರಚಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಒಪ್ಪಿಗೆ ಸೂಚಿಸಲಾಗಿದೆ. ವಿಜಯನಗರ ಜಿಲ್ಲೆಗೆ ಇನ್ನು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ವಿಜಯನಗರವನ್ನು ನೂತನ ಜಿಲ್ಲೆಯಾಗಿ ಮಾಡುವ ಬಗ್ಗೆ ಆ ಭಾಗದ ಹೋರಾಟಗಾರರು ಹಾಗು ಸಚಿವರಾದ ಆನಂದ್ ಸಿಂಗ್ ಅವರು ಬಹುಕಾಲದಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು.
ಮೂಲ ಬಳ್ಳಾರಿ ಜಿಲ್ಲೆಯಿಂದ ಬೇರ್ಪಡಿಸಿ ನೂತನ ವಿಜಯನಗರ ಜಿಲ್ಲೆ ರಚಿಸಲು ಬಹುತೇಕ ಖಚಿತವಾಗಿದ್ದು, ಮೂಲ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ಸೇರಿದಂತೆ, ಸಂಡೂರು, ಸಿರುಗುಪ್ಪ, ಕುರುಗೋಡು, ಕೂಡ್ಲಿಗಿ ತಾಲೂಕುಗಳು ಉಳಿದುಕೊಳ್ಳಲಿದ್ದು, ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಹಾಗು ಹರಪನಹಳ್ಳಿ ತಾಲೂಕುಗಳು ಸೇರಿ ವಿಜಯನಗರ ಜಿಲ್ಲೆ ರಚನೆಯಾಗಲಿದೆ.
ಸದ್ಯ ಕರ್ನಾಟಕದಲ್ಲಿ ಒಟ್ಟು 30 ಜಿಲ್ಲೆಗಳಿದ್ದು, ವಿಜಯನಗರ ಜಿಲ್ಲೆ ರಚನೆಯಾದರೆ, ಒಟ್ಟು ಜಿಲ್ಲೆಗಳ ಸಂಖ್ಯೆ 31ಕ್ಕೆ ಏರಿಕೆಯಾಗಲಿದೆ.