ಬೆಂಗಳೂರು: ಬ್ಲ್ಯಾಕ್ ಫಂಗಸ್ ಸೋಂಕಿತರ ಚಿಕಿತ್ಸೆಗೆ ತೀವ್ರ ಅಗತ್ಯವಿರುವ ‘ಆಂಫೋಟೆರಿಸಿನ್- ಬಿ’ ಔಷಧ ದಾಸ್ತಾನು ಖಾಲಿಯಾಗಿದ್ದು, ಔಷಧವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಇಂದು ಒಂದಷ್ಟು ಔಷಧ ಪೂರೈಕೆಯಾಗುವ ನಿರೀಕ್ಷೆಯನ್ನು ಆರೋಗ್ಯ ಇಲಾಖೆ ಇಟ್ಟುಕೊಂಡಿದೆ.
ಒಂದು ವೇಳೆ ಆಂಫೋಟೆರಿಸಿನ್- ಬಿ ಮೆಡಿಸಿನ್ ಬಾರದಿದ್ದರೆ ಸಮಸ್ಯೆ ಜಟಿಲವಾಗಬಹುದಾಗಿದ್ದು, ರಾಜ್ಯ 20 ಸಾವಿರ ವಯಲ್ಸ್ ಹಂಚಿಕೆಗೆ ಬೇಡಿಕೆ ಇಟ್ಟಿದ್ದು, ಕೇಂದ್ರವು ಮೇ 10 ರಿಂದ 31ರವರಗೆ ಕೇವಲ 1050 ವಯಲ್ಸ್ ಮಾತ್ರ ಹಂಚಿಕೆ ಮಾಡಿದೆ.
ಏನಿದು ‘ಆಂಫೋಟೆರಿಸಿನ್-ಬಿ’ ಔಷಧ?:
ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡವರಿಗೆ ನೀಡಲಾಗುವ ಔಷಧವೇ ಆಂಫೋಟೆರಿಸಿನ್-ಬಿ. ಇದರ ಬೆಲೆಯೂ ಹೆಚ್ಚು. 50 ಮಿಲಿ ಗ್ರಾಂ (ಎಂಜಿ) ವಯಲ್ಸ್‌ಗೆ 6375 ರೂ. ಬೆಲೆ ಇದೆ.
ಪ್ರತಿದಿನ 2 ವಯಲ್ಸ್ ಅಗತ್ಯವಿದ್ದು, ಸೋಂಕಿತ ವ್ಯಕ್ತಿಯ ತೂಕದ ಆಧಾರದಲ್ಲಿ ಈ ಔಷಧ ನೀಡಲಾಗುತ್ತದೆ. ಪ್ರತಿ 1 ಕೆಜಿ ತೂಕಕ್ಕೆ 5 ಎಂಜಿ ಔಷಧ ಬಳಸಬೇಕಾಗಿದ್ದು, 15-20 ದಿನಗಳವರೆಗೆ ಜರುಗುವ ಚಿಕಿತ್ಸೆಗೆ ಸಾಮಾನ್ಯ ತೂಕದ ವ್ಯಕ್ತಿಗೆ 60 ರಿಂದ 80 ವಯಲ್ಸ್ ನೀಡಬೇಕಾಗುತ್ತದೆ. ವಯಸ್ಸಿಗೂ ಮೀರಿ ತೂಕ ಹೊಂದಿದ್ದರೆ 100 ವಯಲ್ಸ್ ಬೇಕಾಗುತ್ತದೆ.