ಶಿವಮೊಗ್ಗ: ಬಿಜೆಪಿಯೊಳಗಿನ ಎಲ್ಲ ಗೊಂದಲಗಳಿಗೆ ಇಂದು ತೆರೆ ಬೀಳಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕೋರ್ ಕಮಿಟಿ ಸಭೆ ಇದೆ. ಅಲ್ಲಿ ಶಾಸಕ ಯತ್ನಾಳ್ ಅವರ ಬಗ್ಗೆ ಚರ್ಚೆ ನಡೆಯುವ ಕುರಿತು ನನಗೆ ಮಾಹಿತಿ ಇಲ್ಲ. ಆಡಳಿತ ಪಕ್ಷವನ್ನು ಎದುರಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ಹೋಗಬೇಕು ಎಂಬುದು ನನ್ನ ಅಪೇಕ್ಷೆ. ಇದನ್ನು ಯತ್ನಾಳ್ ಅವರೂ ಒಪ್ಪಿಕೊಳ್ಳುತ್ತಾರೆ ಎಂದರು.
ಮನುಷ್ಯನ ಸ್ವಭಾವದ ವೀಕ್ಸೆಸ್ ಎಲ್ಲರಿಗೂ ಇರುತ್ತದೆ. ಯತ್ನಾಳ್ ನನ್ನ ಹಾಗೂ ನಮ್ಮ ಪುತ್ರರನ್ನು ಟಾರ್ಗೆಟ್ ಮಾಡುತ್ತಿರಬಹುದು. ಈ ಬಗ್ಗೆ ನನಗೇನೂ ಅಭ್ಯಂತರ ಇಲ್ಲ. ಆದರೆ, ನನ್ನ ಉದ್ದೇಶ ನಾವೆಲ್ಲ ಒಟ್ಟಾಗಿ ಹೋಗಬೇಕೆಂಬುದಾಗಿದೆ. ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವೇ ಹೊರತು, ನಾವು ನಾವೇ ಬಡಿದಾಡಿಕೊಳ್ಳುವುದಲ್ಲ. ಇದು ಹೆಚ್ಚು ಶಕ್ತಿಯನ್ನು ನೀಡುವುದಿಲ್ಲ.
ಅದಕ್ಕಾಗಿ ಎಲ್ಲವನ್ನೂ ಮರೆತು ಒಟ್ಟಾಗಿ ಹೋಗಬೇಕು. ಅಧಿವೇಶನವನ್ನು ಯಾವುದೇ ಗೊಂದಲವಿಲ್ಲದೆ ನಾವೆಲ್ಲ ಒಟ್ಟಾಗಿ ಎದುರಿಸುತ್ತೇವೆ. ಸರಕಾರದ ಹಗರಣಗಳನ್ನು ಬಯಲು ಮಾಡಿ ರಾಜ್ಯದ ಜನರಿಗೆ ನ್ಯಾಯ ಕೊಡಿಸುತ್ತೇವೆ. ಈಗಾಗಲೇ ಇಡಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದೆ. ಇವೆಲ್ಲವೂ ಮುಂಬರುವ ದಿನಗಳಲ್ಲಿ ಚರ್ಚೆ ಆಗಲಿದೆ ಎಂದು ಹೇಳಿದರು.