ಬೆಂಗಳೂರು: 2025ರ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಬೆಂಗಳೂರು ಪೊಲೀಸರು ವ್ಯಾಪಕ ಭದ್ರತಾ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅವರು ಎಲ್ಲರನ್ನೂ ಸುರಕ್ಷಿತವಾಗಿಡಲು ಮತ್ತು ನಗರದ ಜನನಿಬಿಡ ಪ್ರದೇಶಗಳಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಹಿಂದಿನ ವರ್ಷಗಳಲ್ಲಿ ಕಂಡುಬಂದ ಅವ್ಯವಸ್ಥೆ, ಅವಘಡಗಳನ್ನು ಗಮನದಲ್ಲಿರಿಸಿ ಭದ್ರತಾ ಕ್ರಮಗಳನ್ನು ಸ್ಥಾಪಿಸಲು ಪೊಲೀಸರು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಮತ್ತು ಇಂದಿರಾನಗರದಂತಹ ಜನದಟ್ಟಣೆ ಉಂಟಾಗುವ ಪ್ರಮುಖ ಸ್ಥಳಗಳನ್ನು ಗುರುತಿಸಿದ್ದಾರೆ.
ಉತ್ತಮ ಬೆಳಕು, ಬ್ಯಾರಿಕೇಡ್ ಮತ್ತು ರಾತ್ರಿಯ ಮೆಟ್ರೋ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಸಂಸ್ಥೆಗಳು ಮತ್ತು ಸಾರಿಗೆ ಸೇವೆಗಳೊಂದಿಗೆ ಸಭೆಗಳು ನಡೆದಿವೆ. ಜನದಟ್ಟಣೆ ಮತ್ತು ಕಾಲ್ತುಳಿತವನ್ನು ತಪ್ಪಿಸಲು ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಏಕಮುಖ ನಡಿಗೆ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಹೊಸ ವರ್ಷಾಚರಣೆ ಸಮಯದಲ್ಲಿ ಮಾಸ್ಕ್ ಧರಿಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.
ಡಿಸೆಂಬರ್ 31 ರಿಂದ ಪ್ರಮುಖ ಪ್ರದೇಶಗಳಲ್ಲಿ, ವಿಶೇಷವಾಗಿ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಲಾಗುವುದು. ವಾಹನಗಳ ಟೋಯಿಂಗ್ ಕಿರಿಕಿರಿ ತಪ್ಪಿಸಲು ಡಿಸೆಂಬರ್ 31 ರಂದು ಸಂಜೆ 4 ಗಂಟೆಯೊಳಗೆ ವಾಹನಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಲಾಗಿದೆ. ಅಪಘಾತಗಳನ್ನು ತಡೆಗಟ್ಟಲು ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನಗರದ ಮೇಲ್ಸೇತುವೆಗಳ ಮೇಲೆ ಸಂಪೂರ್ಣ ವಾಹನ ನಿಷೇಧ ಇರುತ್ತದೆ.
ರಾತ್ರಿಯಿಡಿ ಕುಡಿದು ವಾಹನ ಚಲಾಯಿಸುವವರು ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸುವವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದು ಹೀಗಾಗಿ ಆದಷ್ಟು ಸಾರ್ವಜನಿಕ ಸಾರಿಗೆಯನ್ನು ಬಳಸಲು ಜನರಲ್ಲಿ ಮನವಿ ಮಾಡಿದ್ದಾರೆ.