ಬೆಳಗಾವಿ: ಅಡ್ಡಾದಿಡ್ಡಿ ಲಾರಿ ಚಲಾಯಿಸಿ ಅಪಘಾತ ಎಸಗಿದ್ದ ಚಾಲಕನನ್ನು ಅಡ್ಡಗಟ್ಟಿ ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕೋಳಿ ಗ್ರಾಮದ ಬಳಿ ನಡೆದಿದೆ. ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದ ಅಜೀಮ್ ಇಪ್ಪೇರಿ(23) ಮೃತ ಲಾರಿ ಚಾಲಕನಾಗಿದ್ದಾನೆ.
ಚಾಲಕ ಅಜೀಮ್ ಸಂಕೇಶ್ವರದಿಂದ ಬೆಳಗಾವಿ ಕಡೆಗೆ ಲಾರಿ ಚಲಾಯಿಸಿಕೊಂಡು ಹೊರಟಿದ್ದ. ಈ ವೇಳೆ ಪರಸಪ್ಪ ನಾಯಿಕ್‌ಗೆ ಸೇರಿದ ಬೈಕ್ ಹಾಗೂ ಹಣಮಂತ ಇಡ್ಲಿ ಎಂಬುವವರಿಗೆ ಸೇರಿದ್ದ ಕ್ಯಾಂಟರ್‌ಗೆ ಲಾರಿ ಗುದ್ದಿದ ಅಜೀಮ್ ಭಯದಿಂದ ಲಾರಿ ನಿಲ್ಲಿಸದೇ ಪರಾರಿಯಾಗಲು ಮುಂದಾಗಿದ್ದ. ಈ ವೇಳೆ ಕಟಬಾಳಿ ಗ್ರಾಮದ ಹತ್ತಿರ ಲಾರಿಗೆ ಕಲ್ಲೆಸೆದು ಪರಸಪ್ಪ ಹಾಗೂ ಹಣಮಂತ ಲಾರಿ ತಡೆದಿದ್ದಾರೆ.
ಈ ವೇಳೆ ಪರಸಪ್ಪ ತನ್ನ ಐವರು ಸ್ನೇಹಿತರ ಜೊತೆಗೂಡಿ ಅಜೀಂ ಜೊತೆಗೆ ವಾಗ್ವಾದಕ್ಕಿಳಿದಿದ್ದು, ಆತನನ್ನು ಲಾರಿಯಿಂದ ಕೆಳಗೆ ಇಳಿಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು ಈ ವೇಳೆ ಐವರು ಸೇರಿ ಅಜೀಂ ಮರ್ಮಾಂಗಕ್ಕೆ ಒದ್ದು, ಬಡಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಚಾಲಕ ಅಜೀಂಗೆ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಅಜೀಂ ಸಾವನ್ನಪ್ಪಿದ್ದಾನೆ.
ಲಾರಿ ಚಾಲಕನ ಹತ್ಯೆ ಹಿನ್ನಲೆ ಕಾರಣರಾದ ಪರಸಪ್ಪ, ಹಣಮಂತ, ಹಾಲಪ್ಪ ಹಳ್ಯಾಗೋಳ, ಈರಪ್ಪ ನಾಯಿಕ್, ಅಮಿತ್ ಶಿಂಧೆ ಸೇರಿ ಐವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ.