ಕಾರವಾರ: ಸ್ಕ್ರ್ಯಾಪ್ ಆದ ಕಾರಿನ ಮಾಲಿಕರಿಗೆ ಕಾರು ಸಂಚಾರಿ ನಿಯಮ ಉಲ್ಲಂಘಿಸಿರುವ ಬಗ್ಗೆ ದಂಡದ ನೋಟಿಸ್ ಬಂದಿದ್ದು, ಈ ಸಂಬಂಧ ಕಾರವಾರ ಐಟಿಐ ಕಾಲೇಜು ಸಮೀಪದ ಬ್ಯಾಂಕ್ ಕಾಲನಿ ನಿವಾಸಿ, ನಿವೃತ್ತ ಸರ್ಕಾರಿ ಉದ್ಯೋಗಿ ಶೀಲಾ ಪ್ರಕಾಶ ನಾಯ್ಕ ತಾಲ್ಲೂಕಿನ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
2013ರಲ್ಲಿ ಭಾರತ್ ಆಟೋ ಕಾರ್ಸ್ ನಿಂದ ಸ್ವಿಫ್ಟ್ ವಿಎಕ್ಸ್ಐ ಕಾರು ಖರೀದಿಸಿದ್ದ ಶೀಲಾ ನಾಯ್ಕ ಕಾರವಾರ ಆರ್‌ಟಿಓದಲ್ಲಿ ಅದರ ನೋಂದಣಿ ಮಾಡಿಸಿದ್ದರು. ಆದರೆ 2016ರ ಡಿಸೆಂಬರ್ 18 ರಂದು ರಸ್ತೆಬದಿಯ ಹೊಂಡಕ್ಕೆ ಬಿದ್ದು ಹಾಳಾಗಿತ್ತು.
ಅದಕ್ಕೆ 2017ರಲ್ಲಿ ಬಜಾಜ್ ವಿಮೆ ಕಂಪೆನಿಯಿಂದ ವಿಮಾ ಮೊತ್ತ ಪಡೆದಿದ್ದರು. ನಂತರ ಕಾರನ್ನು ಸ್ಕ್ರ್ಯಾಫ್‌ಗೆ ಮಾಡಲು ಸೂಚಿಸಿದ್ದರಿಂದ ಕಾರನ್ನು ಶೋರೂಂ ನಲ್ಲಿಯೇ ಬಿಟ್ಟು ಬಂದಿದ್ದರು.
ಆದರೆ ಇತ್ತೀಚೆಗೆ ಬೆಂಗಳೂರಿನ ಸಿಟಿ ಟ್ರಾಫಿಕ್ ಪೊಲೀಸ್ ಠಾಣೆಯಿಂದ ಶೀಲಾ ಅವರ ಹೆಸರಿಗೆ ನೋಟಿಸ್ ಬಂದಿದ್ದು, ಅವರು ಈ ಹಿಂದೆ ಬಳಸುತ್ತಿದ್ದ ಕಾರ್ ಸಂಚಾರಿ ನಿಯಮ ಉಲ್ಲಂಘಿಸಿರುವುದಾಗಿ 2 ಸಾವಿರ ದಂಡ ತುಂಬುವಂತೆ ಸೂಚಿಸಲಾಗಿದೆ.
ಆದರೆ ಕಾರ್ ಸ್ಕ್ರ್ಯಾಪ್‌ಗೆ ಸೂಚಿಸಿದರೂ ಇದೀಗ ಓಡಾಟ ಮಾಡುತ್ತಿರುವ ಆರೋಪದ ಹಿನ್ನಲೆಯಲ್ಲಿ ಭಾರತ್ ಆಟೋ ಕಾರ್ಸ್ ನವರ ವಿರುದ್ಧ ಇದೀಗ ಪ್ರಕರಣ ದಾಖಲಿಸಿದ್ದಾರೆ.