ನವದೆಹಲಿ: ‘ಡಿಜಿಟಲ್ ಅರೆಸ್ಟ್’ ಸೈಬರ್ ಅಪರಾಧದ ಕುರಿತು ಭಾನುವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದು ಸಮಾಜದ ಎಲ್ಲಾ ವರ್ಗದವರನ್ನು ಆತಂಕಗೊಳಿಸಿದ್ದು, ಇಂತಹ ಪರಿಸ್ಥಿತಿ ಎದುರಾದಾಗ ‘ನಿಂತು, ಯೋಚಿಸಿ ಮತ್ತು ಕ್ರಮ ತೆಗೆದುಕೊಳ್ಳಿ’ ಎಂಬ ಮಂತ್ರವನ್ನು ಅಳವಡಿಸಿಕೊಳ್ಳುವಂತೆ ಜನತೆಗೆ ಕರೆಕೊಟ್ಟಿದ್ದಾರೆ.
ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನಿಖಾ ಸಂಸ್ಥೆಗಳು ಸಮಸ್ಯೆಯನ್ನು ಎದುರಿಸಲು ರಾಜ್ಯಗಳೊಂದಿಗೆ ಕೆಲಸ ಮಾಡುತ್ತಿವೆ. ಆದರೆ ಈ ಅಪರಾಧದಿಂದ ರಕ್ಷಿಸಿಕೊಳ್ಳುವಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಅಗತ್ಯ ಎಂದರು. ಈ ವೇಳೆ ತಮ್ಮದೇ ಪ್ರತಿನಿಧಿಯೊಬ್ಬರ ವೀಡಿಯೋ ಪ್ರದರ್ಶಿಸಿದ ಪ್ರಧಾನಿ ಮೋದಿ, ವಂಚಕರು ಅಧಿಕಾರಿಗಳಂತೆ ಬಿಂಬಿಸಿ, ಜನರಿಂದ ಮಾಹಿತಿ ಕಲೆಹಾಕಿದ ಬಳಿಕ ಹೇಗೆ ಭಯಪಡಿಸಿ ಜನರನ್ನು ಮೋಸಗೊಳಿಸುತ್ತಾರೆ ಎಂದು ತೋರಿಸಿದರು.
“ಡಿಜಿಟಲ್ ಅರೆಸ್ಟ್ ವಂಚನೆಗಳ ಬಗ್ಗೆ ಎಚ್ಚರದಿಂದಿರಿ. ಅಂತಹ ತನಿಖೆಗಾಗಿ ಯಾವುದೇ ತನಿಖಾ ಸಂಸ್ಥೆಯು ಫೋನ್ ಅಥವಾ ವೀಡಿಯೊ ಕರೆ ಮೂಲಕ ನಿಮ್ಮನ್ನು ಸಂಪರ್ಕಿಸುವುದಿಲ್ಲ” ಎಂದು ಅವರು ಹೇಳಿದರು. ಜನರು ಇಂತಹ ವಂಚನೆಗಳನ್ನು ಎದುರಿಸಿದ ಸಂದರ್ಭದಲ್ಲಿ ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ 1930ನ್ನು ಸಂಪರ್ಕಿಸಿ ಮತ್ತು ಪೊಲೀಸರಿಗೂ ಮಾಹಿತಿ ನೀಡುವಂತೆ ಮನವಿ ಮಾಡಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚು ವರದಿಯಾಗುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಕುರಿತು ಪ್ರಸ್ತಾಪಿಸಿದ ಅವರು, ವಂಚಕರಿಂದ ಕರೆಗಳು ಬಂದಂತಹ ಸಂದರ್ಭಗಳಲ್ಲಿ ಅಂತಹ ಸಂಭಾಷಣೆಗಳನ್ನು ರೆಕಾರ್ಡ್ ಮಾಡಬೇಕು ಮತ್ತು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಬೇಕು ಎಂದರು.
ಇನ್ನು ತಮ್ಮ ಮನ್ ಕಿ ಬಾತ್‌ನಲ್ಲಿ, ಆ‌್ಯನಿಮೇಷನ್ ಜಗತ್ತಿನಲ್ಲಿ ಭಾರತೀಯ ಪ್ರತಿಭೆಗಳ ಹೆಚ್ಚುತ್ತಿರುವ ಪ್ರಭಾವದ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಸೃಜನಶೀಲ ಶಕ್ತಿಯ ಅಲೆಯು ಭಾರತವನ್ನು ಆವರಿಸುತ್ತಿದೆ. ಆ‌್ಯನಿಮೇಷನ್ ಜಗತ್ತಿನಲ್ಲಿ ‘ಮೇಡ್ ಇನ್ ಇಂಡಿಯಾ’ ಮತ್ತು ‘ಮೇಡ್ ಬೈ ಇಂಡಿಯಾ’ ಪ್ರಕಾಶಮಾನವಾಗಿ ಮಿಂಚುತ್ತಿದೆ. ಛೋಟಾ ಭೀಮ್, ಕೃಷ್ಣ ಮತ್ತು ಮೋಟು ಪತ್ಲು ಮುಂತಾದ ಭಾರತೀಯ ಆ‌್ಯನಿಮೇಷನ್ ಪಾತ್ರಗಳು ವ್ಯಾಪಕವಾಗಿ ಜನಪ್ರಿಯವಾಗಿವೆ. ಭಾರತದ ವಿಷಯ ಮತ್ತು ಸೃಜನಶೀಲತೆಯನ್ನು ಜಗತ್ತಿನಾದ್ಯಂತ ಇಷ್ಟಪಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಭಾರತವು ಅನಿಮೇಷನ್‌ನಲ್ಲಿ ಕ್ರಾಂತಿಯನ್ನು ಸೃಷ್ಟಿಸುವ ಹಾದಿಯಲ್ಲಿದೆ. ಮತ್ತು ಭಾರತೀಯ ಆಟಗಳು ಕೂಡ ಜನಪ್ರಿಯವಾಗುತ್ತಿವೆ. ‘ಆತ್ಮನಿರ್ಭರ ಭಾರತ’ದ ಪ್ರಯತ್ನವು ಪ್ರತಿಯೊಂದು ವಲಯದಲ್ಲೂ ದಾಪುಗಾಲು ಹಾಕುತ್ತಿದೆ. ದೇಶವು ತನ್ನ ರಕ್ಷಣಾ ಉತ್ಪನ್ನಗಳನ್ನು ಈಗ 85ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.