ಪಾಕಿಸ್ತಾನಿ ಏಜೆಂಟರ ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಬಿದ್ದ ಭಾರತಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ನೀಡುತ್ತಿದ್ದ ಸೇನಾ ಯೋಧನನ್ನು ಬಂಧಿಸಲಾಗಿದೆ. ಸೇನೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ ಬಳಿಕ ಸೇನಾ ನೌಕರ ಶಾಂತಿಮೆ ರಾಣಾ (24) ಅವರನ್ನು ಬಂಧಿಸಲಾಗಿದೆ ಎಂದು ಗುಪ್ತಚರ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಜೈಪುರದ ಆರ್ಟರಿ ಯೂನಿಟ್‌ನಲ್ಲಿ ಕೆಲಸ ಮಾಡುತ್ತಿರುವ ಶಾಂತಿ ರಾಣಾ ಅವರ ಹುಟ್ಟೂರು ಪಶ್ಚಿಮ ಬಂಗಾಳದ ಬಾಗುಂಡಾ ಜಿಲ್ಲೆಯ ಕಾಂಚನ್‌ಪುರ ಗ್ರಾಮ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.
ಪಾಕಿಸ್ತಾನಿ ಏಜೆಂಟ್‌ಗಳಾದ ಗುರ್ನೌರ್ ಕೌರ್ ಅಲಿಯಾಸ್ ಅಂಕಿತಾ ಮತ್ತು ನಿಶಾ ಅವರನ್ನು ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಸೇನಾ ಉದ್ಯೋಗಿ ಶಾಂತಿಮೆ ರಾಣಾ ಪರಿಚಯವಾಯಿತು. ರಾಣಾ ಫೋನ್ ನಂಬರ್ ತೆಗೆದುಕೊಂಡ ಈ ಇಬ್ಬರು ಏಜೆಂಟ್ ಗಳು ರಾಣಾ ಜೊತೆ ವಾಟ್ಸ್ ಆಪ್ ಮೂಲಕ ಚಾಟ್ ಮಾಡುತ್ತಿದ್ದರು. ಸೇನಾ ಉದ್ಯೋಗಿ ಶಾಂತಿಮೆ ರಾಣಾ ಅವರು ಅವರನ್ನು ಸಂಪೂರ್ಣವಾಗಿ ನಂಬಿದ ನಂತರ, ಇಬ್ಬರು ಏಜೆಂಟ್ಗಳು ಮಿಲಿಟರಿ ರಹಸ್ಯಗಳನ್ನು ತಿಳಿಯಲು ಪ್ರಾರಂಭಿಸಿದ್ದರು. ಇದಕ್ಕಾಗಿ ರಾಣಾಗೆ ಒಂದಷ್ಟು ಹಣವನ್ನೂ ನೀಡಲಾಗಿತ್ತು ಎಂದು ರಾಜಸ್ಥಾನ ಗುಪ್ತಚರ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಹನಿಟ್ರ್ಯಾಪ್ ಹೇಗೆ ಸಾಗಿತು..
ಶಾಂತಿಮೆ ರಾಣಾ 2018 ರಲ್ಲಿ ಸೇನೆಗೆ ಸೇರಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಆತನ ವಿವರ ಹಾಗೂ ಪ್ರೊಫೈಲ್ ಪರಿಶೀಲಿಸಿದ ಏಜೆಂಟ್ ಒಬ್ಬರು ಆತನಿಗೆ ಮಿಲಿಟರಿ ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಎಂದು ಪರಿಚಯ ಮಾಡಿಕೊಂಡಿದ್ದು, ಇನ್ನೊಬ್ಬಳು ಮಿಲಿಟರಿಯ ನರ್ಸಿಂಗ್ ವಿಭಾಗದಲ್ಲಿ ಕೆಲಸ ಮಾಡುವುದಾಗಿ ನಂಬಿಸಿದ್ದಳು.
ಆ ಬಳಿಕ ರಾಣಾ.. ತನ್ನ ರೆಜಿಮೆಂಟ್ ಬಗ್ಗೆ ರಹಸ್ಯ ಮಾಹಿತಿ ಜತೆಗೆ ಸೈನಿಕರು ಕಸರತ್ತು ನಡೆಸುತ್ತಿರುವ ವಿಡಿಯೋಗಳನ್ನೂ ಅವರಿಗೆ ಕಳುಹಿಸಿದ್ದರು ಎಂದು ರಾಜಸ್ಥಾನದ ಗುಪ್ತಚರ ವಿಭಾಗದ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಇದೇ ತಿಂಗಳ 25ರಂದು ರಾಣಾನನ್ನು ಬಂಧಿಸಲಾಗಿತ್ತು.. ಸದ್ಯ ಆತನನ್ನು ತಮ್ಮ ವಶದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.